ರಾಂಚಿ: ಜಾರ್ಖಂಡ್‌ನಲ್ಲಿ ಕುಖ್ಯಾತ ದರೋಡೆಕೋರ ಅಮನ್ ಸಾವೊನನ್ನು ಆತನ ಸಹಚರರು ಪೊಲೀಸರ ವಶದಿಂದ ಪಾರು ಮಾಡಲು ಯತ್ನಿಸಿದ್ದು, ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ (Encounter) ಆತ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ದರೋಡೆಕೋರನನ್ನು ನೆರೆಯ ಛತ್ತೀಸ್‌ಗಢದ ರಾಯ್‌ಪುರ ಜೈಲಿನಿಂದ ರಾಂಚಿಗೆ ಕರೆತರುತ್ತಿದ್ದಾಗ ಈ ದಾಳಿ ನಡೆದಿದೆ. ಅವನನ್ನು ಬಿಡುಗಡೆ ಮಾಡಲು ಆತನ ಗ್ಯಾಂಗ್‌ನ ಸದಸ್ಯರು ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಸಾವೊ ಹತನಾಗಿದ್ದಾನೆ. ಕೊಲೆ ಮತ್ತು ಸುಲಿಗೆ ಪ್ರಕರಣದಲ್ಲಿ 2020 ರಲ್ಲಿ ಆತನನ್ನು ಬಂಧಿಸಲಾಗಿತ್ತು.
ರಾಂಚಿಯಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸಾವೊ ಗ್ಯಾಂಗ್‌ನ ಸದಸ್ಯರು ಬಾಂಬ್ ಸಿಡಿಸಿ, ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಸಾವೊ ಎಸ್‌ಟಿಎಫ್ ಜವಾನನಿಂದ ಐಎನ್‌ಎಸ್‌ಎಎಸ್ ರೈಫಲ್ ಕಸಿದು ಕೊಂಡು ವಾಹನದಿಂದ ಇಳಿದು ಓಡಿ ಹೋಗಿದ್ದ. ಬಳಿಕ ವಾಹನದ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಆತ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಎನ್‌ಐಎ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾವೊನನ್ನು ರಾಯ್‌ಪುರದಿಂದ ರಾಂಚಿಗೆ ಕರೆತರಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಕ್ರಮವನ್ನು ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿಯವರು ಪ್ರಶಂಸಿದ್ದಾರೆ.