ಭೋಪಾಲ್: ಮಕರ ಸಂಕ್ರಾಂತಿ ದಿನವೇ 16 ವರ್ಷದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮಜ್ಗಾವಾ ಪ್ರದೇಶದ ಕಾಥಾ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಈಕೆಯ ಮೇಲೇ ಅದೇ ಪ್ರದೇಶದ ಅಣ್ಣ-ತಮ್ಮಂದಿರಿಂದ ಭಾನುವಾರ ಅತ್ಯಾಚಾರ ನಡೆದಿತ್ತು ಎಂಬುದಾಗಿ ವರದಿಯಾಗಿದೆ.
ಮಕರ ಸಂಕ್ರಾಂತಿ ಹಬ್ಬ ಆಚರಿಸಲು ಬಾಲಕಿಯ ತಾಯಿ ಸಂಬಂಧಿಕರ ಮನೆಗೆ ತೆರಳಿದ್ದರು. ತಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರೂ ಕೆಲಸಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಬಾಲಕಿ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ಘಟನೆ ನಡೆಯುತ್ತಿದ್ದಂತೆಯೇ ಆಕೆಯ ಸಹೋದರ ಕಾಪಾಡಲು ಬಂದರೂ ಪ್ರಯೋಜನವಾಗಿರಲಿಲ್ಲ ಅಂತ ಅಲ್ಲಿನ ಎಸ್ ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಆಕೆಯನ್ನು ರಕ್ಷಿಸಲು ಮಗ ಹೋಗಿದ್ದಾನೆ. ಆದ್ರೆ ಮಗಳು ಸಾವನ್ನಪ್ಪಿದ್ದು, ಮಗನಿಗೆ ಗಾಯಗಳಾಗಿವೆ ಅಂತ ಹೇಳಿದ್ದಾರೆ.
ಇನ್ನು ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕಾಗಿ ಪೊಲಿಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಅಡಿ ಪ್ರಕರಣ ದಾಖಲಿಸಲಾಗಿದೆ.