ಆಗ್ರ: ಮಥುರಾ ಜಿಲ್ಲೆಯ ಬರ್ಸಾನಾದಲ್ಲಿರುವ ಪ್ರಸಿದ್ಧ ರಾಧ ರಾಣಿ ದೇವಾಲಯದಲ್ಲಿ 45 ವರ್ಷದ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳಲ್ಲಿ ಒಬ್ಬನಾದ ದೇವಸ್ಥಾನದ ವಾಚ್‍ಮನ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ದೇವಸ್ಥಾನದ ವಾಚ್‍ಮನ್ ಹಾಗೂ ಅಡುಗೆ ಕೆಲಸ ಮಾಡುವ ನೌಕರ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ದೇವಸ್ಥಾನದ ಕಾವಲುಗಾರ ಕನ್ಹೈಯ್ಯ ಯಾದವ್‍ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಜೇಂದರ್ ಠಾಕೂರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 11ರ ರಾತ್ರಿ ಮಹಿಳೆ ದೇವಾಲಯದಲ್ಲಿ ಮಲಗಿದ್ದಾಗ ಈ ಇಬ್ಬರು ಆರೋಪಿಗಳು ಬಂದು ಆಕೆಯನ್ನು ಬಲವಂತವಾಗಿ ದೇವಸ್ಥಾನದ ನಿರ್ಜನ ಸ್ಥಳಕ್ಕೆ ಕರೆದೊಯ್ಡು ಅತ್ಯಾಚಾರ ಎಸಗಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆ ಬಳಿಕ ಬರ್ಸಾನಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಆದರೆ ಮಹಿಳೆಯ ಭಾಷೆ ಸಮಸ್ಯೆ ಇದ್ದಿದ್ದರಿಂದ ಠಾಣೆಯ ಪೊಲೀಸರಿಗೆ ಆಕೆ ಹೇಳಿದ್ದು ಅರ್ಥವಾಗದೆ ಈ ರೀತಿ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಭಾಷಾಂತಕಾರರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಿದ್ದಾರೆ.
ಮಥುರಾದ ಎಸ್‍ಎಸ್‍ಪಿ ಸ್ವಾಪ್ನಿಲ್ ಮಂಗೈನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಇಬ್ಬರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಆರೋಪಿ ರಾಜೇಂದ್ರನನ್ನು ಪತ್ತೆ ಮಾಡಿದ್ದೇವೆ ಎಂದಿದ್ದಾರೆ.
ಅಲ್ಲದೆ ಸಂತ್ರಸ್ತೆ ಪೊಲೀಸರ ವಿರುದ್ಧ ಮಾಡಿರುವ ಆರೋಪದ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಆಕೆಯ ಆರೋಪ ನಿಜವೆಂದು ತಿಳಿದುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸದ್ಯ ಸಂತ್ರಸ್ತೆಯನ್ನು ದೇವಸ್ಥಾನದ ಇನ್ನಿತರೆ ಭಕ್ತರು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಗಂಡ ಹಾಗೂ ಮಗು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಆರೋಪಿಗಳಿಬ್ಬರನ್ನೂ ದೇವಸ್ಥಾನದ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Uttar Pradesh: Woman raped in premises of a temple by cook and security guard in Mathura's Barsana on Sept 11 says police, case registered. pic.twitter.com/H3vmh6QOEO
— ANI UP/Uttarakhand (@ANINewsUP) September 16, 2017