– ಭರ್ಜರಿ ಬೇಟೆಯಾಡಿ 35 ಲಕ್ಷ ರೂ. ಹಣ, 500 ಗ್ರಾಂ ಚಿನ್ನಾಭರಣ, ರಕ್ತ ಚಂದನ ವಶ
ಬೆಂಗಳೂರು: ಚಂದನವನ ಎಂದೇ ಪ್ರಖ್ಯಾತಿ ಪಡೆದಿರುವ ಕನ್ನಡ ನಾಡಿನಲ್ಲಿ ರಕ್ತ ಚಂದನ ಹಾಗೂ ಶ್ರೀಗಂಧ ಮರ ಕಳ್ಳ ಸಾಗಾಣೆಯಲ್ಲಿ ತೊಡಗಿದ್ದ ಕುಖ್ಯಾತ ಆರೋಪಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲು ಬೆಂಗಳೂರು ಸೆಂಟ್ರಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತಂದೆ ರಿಯಾಸ್, ಮಗ ಬಾಬಾ ಎಂಬ ನಟೋರಿಯಸ್ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಕೋಲಾರ ಜಿಲ್ಲೆ ಮಲೂರು ಬಳಿಯ ಕಟ್ಟಿಗೇನಹಳ್ಳಿ ಗ್ರಾಮದವರಾಗಿದ್ದಾರೆ. ಕಾರ್ಯಾಚರಣೆ ವೇಳೆ ಸುಮಾರು 35 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಹಾಗೂ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಕೋಲಾರ ಜಿಲ್ಲೆಯ ಕಟ್ಟಿಗೇನಹಳ್ಳಿ ಗ್ರಾಮದ ಈ ಇಬ್ಬರು ಆರೋಪಿಗಳು ಶ್ರೀಗಂಧ ಕಳ್ಳ ಸಾಗಾಣೆ ದಂಧೆಯಲ್ಲಿ ಕುಖ್ಯಾತಿ ಪಡೆದಿದ್ದು, ದಂಧೆಗೆ ಇಡೀ ಗ್ರಾಮವೇ ಸಾಥ್ ನೀಡುತ್ತಿತ್ತು. ಪೊಲೀಸರು ದಂಧೆಕೋರರ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿದರೆ ಮಹಿಳೆಯರು, ಹೆಣ್ಣು ಮಕ್ಕಳನ್ನು ಮುಂದೇ ಬಿಟ್ಟು ಹೈಡ್ರಾಮಾ ಸೃಷ್ಟಿಸಿದ್ದರು. ಅಲ್ಲದೇ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಸ್ಥಳದಿಂದ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಇದೇ ದಂಧೆಯನ್ನು ನಡೆಸುತ್ತಿದ್ದ ಖದೀಮರು ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧ ಕಳ್ಳಸಾಗಾಣೆ ಮಾಡುತ್ತಿದ್ದರು. ಅಲ್ಲದೇ ಯಾರೇ ಶ್ರೀ ಗಂಧ ಕಳ್ಳತನ ಮಾಡಿದ್ದರು ಇಲ್ಲಿಂದಲೇ ಮಾರಾಟವಾಗುತ್ತಿತ್ತು. ಈ ಗ್ಯಾಂಗ್ ಶ್ರೀಗಂಧ ಕಳ್ಳತನ ಮಾಡಲು ಪ್ರೇರಣೆ ನೀಡಿ ಸಹಾಯ ಮಾಡುತ್ತಿದ್ದರು. ಕಳ್ಳತನ ಮಾಡಲು ತಮಿಳುನಾಡಿನ ಇಳಯರಾಜ ಎಂಬ ಗ್ಯಾಂಗ್ ಕರೆಯಿಸಿ ಡೀಲ್ ಮಾಡುತ್ತಿದ್ದರು. ಸರ್ಕಾರಿ ಕಚೇರಿಯ ಬಳಿ ಇರುತ್ತಿದ್ದ ಮರಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ 2010 ರಿಂದಲೇ ಇದರಲ್ಲಿ ತೊಡಗಿದ್ದರು.
ಮಿಲಿಟರಿ ಮಾದರಿಯಲ್ಲಿ ಕಾರ್ಯಾಚರಣೆ: ಕೆಲ ಪ್ರಕರಣಗಳಲ್ಲಿ ಇವರ ವಿರುದ್ಧ ದೂರು ದಾಖಲಿಸಿ ಬಂಧನ ಮಾಡಲು ತೆರಳಿದ ಪೊಲೀಸರ ಮೇಲೆ ಊರಿನ ಗ್ರಾಮಸ್ಥರು ಕಲ್ಲು ತೂರಾಟ ನಡೆಸುತ್ತಿದ್ದರು. ಆದ್ದರಿಂದ ಕಳೆದ 3 ವರ್ಷಗಳಿಂದ ಈ ಗ್ರಾಮಕ್ಕೆ ಪೊಲೀಸರು ಹೋಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸುಮಾರು 200 ಅಧಿಕಾರಿ ಸಿಬ್ಬಂದಿ, 3 ಕೆಎಸ್‍ಆರ್‍ಪಿ ವಾಹನ ಸೇರಿ ಇಡೀ ಗ್ರಾಮವನ್ನೇ ಸುತ್ತುವರೆದು ದಾಳಿ ನಡೆಸಿದ್ದರು. ತಡರಾತ್ರಿ 2 ಗಂಟೆ ಅವಧಿಯಲ್ಲಿ ದಾಳಿ ನಡೆಸಿದ್ದು, 3 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲು ಅವರ ಮನವೊಲಿಕೆ ಮಾಡಲು ಪೊಲೀಸರು ಯತ್ನಿಸಿದ್ದರು. ಆದರೆ ಆರೋಪಿಗಳು ಒಪ್ಪದ ಕಾರಣ ಮನೆ ಬಾಗಿಲು ಮುರಿದು ಕಾರ್ಯಾಚರಣೆ ನಡೆಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀಗಂಧ ಕಳ್ಳತನಕ್ಕೆ ಸಹಾಯ: ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಶ್ರೀಗಂಧ ಕಳ್ಳತನ ನಡೆಸುತ್ತಿರುವ ಈ ಆರೋಪಿಗಳು ಸುಮಾರು ವಾಹನಗಳ ನಂಬರ್ ಪ್ಲೇಟ್ ಹೊಂದಿದ್ದರು. ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಕಳ್ಳತನ ಮಾಡಲು ವ್ಯಕ್ತಿಗಳನ್ನು ಕರೆಸುತ್ತಿದ್ದರು. ಕಳ್ಳತನ ಮಾಡುವ ವೇಳೆ ಓಎಲ್‍ಎಕ್ಸ್ ತಾಣದಲ್ಲಿ ಮಾರಾಟ ಮಾಡುತ್ತಿದ್ದ ವಾಹನ ನಂಬರ್ ಗಳನ್ನು ನಮೂದಿಸಿ ವಾಹನ ನೀಡುತ್ತಿದ್ದರು.
ಬೆಂಗಳೂರು ಕೇಂದ್ರ ಪೊಲೀಸರಾದ ಡಿಸಿಪಿ ದೇವರಾಜ್, ಡಿಸಿಪಿ ಅಹ್ಮದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 5 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಈ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆಯಲ್ಲಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ ಶ್ರೀಗಂಧ ಕಳ್ಳತನ ಮಾಡಿ ರಾಜ್ಯದ ವಿವಿಧ ಶ್ರೀಗಂಧ ಕಾರ್ಖಾನೆಗಳು ಮಾರಾಟ ಮಾಡುತ್ತಿದ್ದ ಬಗ್ಗೆ ಡೈರಿ ಕೂಡ ಲಭ್ಯವಾಗಿದ್ದು, ಯಾರಿಗೆ, ಎಷ್ಟು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದ್ದರಿಂದ ಶ್ರೀಗಂಧ ಖರೀದಿ ಮಾಡುತ್ತಿದ್ದ ಕಂಪೆನಿಯ ಮಾಲೀಕರನ್ನು ಕೋಕಾ ಕಾಯ್ದೆಯಲ್ಲಿ ತರುವ ಕಾರ್ಯವನ್ನ ಪೊಲೀಸರು ಮಾಡಿದ್ದಾರೆ.
ಇತ್ತೀಚೆಗೆ ಅರ್ಧ ಲೈಫ್ ಎಂಬ ಕಂಪೆನಿ ಅರ್ಧ ಟನ್ ರಕ್ತ ಚಂದನಕ್ಕೆ ಈ ಗ್ಯಾಂಗಿಗೆ ಭೇಟಿಗೆ ಇಟ್ಟಿತ್ತು. ಈ ಮಾಲ್ ಸಿದ್ಧಪಡಿಸಲು ಆರೋಪಿಗಳು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ತಮಿಳುನಾಡಿನ ಇಳಯರಾಜ್ ಗ್ಯಾಂಗ್ ಬಂಧನ ಆಗಿದೆ. ಅವರಿಂದ ಪಡೆದ ಮಾಹಿತಿ ಮೇರೆಗೆ ನ್ಯಾಯಾಲಯ ಹಾಗೂ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ದಂಧೆಯಲ್ಲಿ ತೊಡಗಿದ್ದ ಮತ್ತೊಂದು ಗ್ಯಾಂಗನ್ನು ಬಂಧಿಸಲಾಗಿದೆ. ಇದರಲ್ಲಿ ಮತ್ತೊಬ್ಬ ಆರೋಪಿ ಬಂಧನ ಬಾಕಿ ಇದೆ. ಮುಂದಿನ ಹಂತದ ಕಾರ್ಯಾಚರಣೆಯಲ್ಲಿ ಎಲ್ಲರ ಬಂಧನ ಮಾಡಲಾಗುತ್ತದೆ. ಗ್ಯಾಂಗ್ ಬಂಧನದಿಂದ ರಾಜ್ಯದಲ್ಲಿ ನಡೆದ ಹಲವು ಶ್ರೀಗಂಧ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ಬಂಧಿತ ಇಬ್ಬರು ಆರೋಪಿಗಳು ಈ ಹಿಂದೆ ಒಮ್ಮೆ ಮಾತ್ರ ಬಂಧನವಾಗಿದ್ದರು. ಆ ಬಳಿಕ ಇವರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv