ಧಾರವಾಡ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಚಿತ್ರದುರ್ಗ ಮೂಲದ ಇಬ್ಬರನ್ನು ವ್ಯಕ್ತಿಗಳನ್ನು ಧಾರವಾಡಕ್ಕೆ ಕರೆಸಿಕೊಂಡು, ಚಾಕು ತೋರಿಸಿ 15 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಮೂಲದ ಜಿ.ಆರ್. ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಕಡಿಮೆ ಬೆಲೆಗೆ ಚಿನ್ನ ಪಡೆಯಲು ಬಂದು ಮೋಸ ಹೋಗಿದ್ದು, ಅಕ್ಷಯ ತೃತೀಯ ದಿನದಂದೇ ಘಟನೆ ನಡೆದಿದೆ.
Advertisement
Advertisement
ಏನಿದು ಪ್ರಕರಣ: ದಾವಣಗೆರೆ ಮೂಲದ ವ್ಯಕ್ತಿಯೊಬ್ಬರಿಂದ ಆರೋಪಿಗಳು ರವಿಕುಮಾರ್ ಅವರಿಗೆ ಪರಿಚಯವಾಗಿದ್ದರು. ಈ ವೇಳೆ 200 ರಿಂದ 300 ರೂ. ಗಳಿಗೆ ಒಂದು ಗ್ರಾಂ ಚಿನ್ನ ಕೊಡಿಸುವುದಾಗಿ ಹೇಳಿ ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಅವರು ಜಾಕೀರ್ ಹುಸೇನ್ ಅವರೊಂದಿಗೆ ಚಿತ್ರದುರ್ಗದಿಂದ ಧಾರವಾಡಕ್ಕೆ ಹಣದೊಂದಿಗೆ ಆಗಮಿಸಿದ್ದರು. ಈ ವೇಳೆ ನಗರದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ ಅವರು ಮೊದಲು ಸ್ಯಾಂಪಲ್ ಎಂದು ಅಸಲಿ ಚಿನ್ನವನ್ನು ತೋರಿಸಿದ್ದು, ಬಳಿಕ ಹಣ ತಂದಿರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ.
Advertisement
ಹಣ ತಂದಿರುವುದು ಖಚಿತವಾಗುತ್ತಿದಂತೆ ತಮ್ಮ ಆಸಲಿ ಮುಖ ಪರಿಚಯ ಮಾಡಿಸಿದ ಖದೀಮರು ಚಾಕು ತೋರಿಸಿ ಅವರ ಬಳಿ ಇದ್ದ ಹಣ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಕಡಿಮೆ ಹಣಕ್ಕೆ ಚಿನ್ನ ಪಡೆಯುವ ಆಸೆಯಿಂದ ಬಂದ ರವಿಕುಮಾರ್ ಹಾಗೂ ಹುಸೇನ್ ಅವರು ಇತ್ತ ಚಿನ್ನ ಇಲ್ಲದೇ, ತಂದಿದ್ದ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳು ನಕಲಿ ಹೆಸರುಗಳಿಂದ ತಮ್ಮನ್ನು ಪರಿಚಯಿಸಿಕೊಂಡು ಧಾರವಾಡದ ರಜತಗಿರಿಯಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ.