ತುಮಕೂರು: ‘ಹಿಂದೂಗಳಿಗೆ ನಾಯಿಯಂತೆ ಅಲೆಯಿಸುತ್ತಾರೆ’ ಗಣೇಶೋತ್ಸವ ಪರವಾನಗಿ ಪಡೆಯಲು ಹಿಂದೂಗಳು ನಾಯಿಯಂತೆ ಅಲೆಯುವ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸದಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಹೇಳಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶನನ್ನು ಕೂರಿಸಲು ಪರವಾನಗಿ ಪಡೆಯಲು ತೆರಳಿದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಸುತ್ತಾಡಿಸುತ್ತಾರೆ. ಈ ಬಾರಿ ಯಾವುದೇ ಕಾರಣಕ್ಕೂ ಹಾಗಾಗಬಾರದು. ಎಲ್ಲ ಪರವಾನಗಿಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈಗ ಇರುವುದು ಬೇರೆ ಯಾವುದೋ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಅಧಿಕಾರಿಗಳು ಇದನ್ನು ಅರಿತು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಯಾರೇ ಯಾವುದೇ ಯುವಕ ಸಂಘದಿಂದ ಗಣೇಶೋತ್ಸವಕ್ಕೆ ಪರವಾನಗಿ ಕೇಳಿದರೂ ಶೀಘ್ರವೇ ನೀಡಬೇಕು. ಸತಾಯಿಸಕೂಡದು ಎಂದು ತಿಳಿಸಿದ್ದಾರೆ.
ವಿಜಯಪುರದಲ್ಲಿ ಬನಾಯೆಂಗೆ ಮಂದಿರ್ ಸೇರಿ 2 ಹಾಡುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 12ರ ವರೆಗೆ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಹಾಡು ಬಳಕೆ ಹಿನ್ನೆಲೆ ಮತೀಯ ಗಲಭೆ ಉಂಟಾದ ಕಾರಣ ಹಾಡಿನ ಬಳಕೆ ನಿಷೇಧ ಮಾಡಲಾಗಿದೆ. ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಮ್ ಪತ್ರದಲ್ಲಿ ಉಲ್ಲೇಖ ಹಿನ್ನೆಲೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.