ಬೆಳಗಾವಿ: ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ ಗಣೇಶನ ಆಕೃತಿಯೊಂದು ನಿಂಬೆಹಣ್ಣಿನ ಮರದಲ್ಲಿ ಉದ್ಭವವಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶಿವರಾಯ ಮಾಳಿ ಎಂಬವರ ಮನೆ ಮುಂದೆ ಇರುವ ನಿಂಬೆಹಣ್ಣಿನ ಮರದಲ್ಲಿ ಆನೆ ಮುಖದ ಆಕಾರದ ಸೊಂಡಿಲು, ಹಣೆ ಹಾಗೂ ಬಾಯಿ ಉದ್ಭವವಾಗಿದೆ. ಇದನ್ನು ಗಮನಿಸಿದ ಶಿವರಾಯ ಮಾಳಿ ಅವರು ಗಣೇಶನ ಮೂರ್ತಿಯೆಂದು ದಿನನಿತ್ಯ ಪೂಜೆ ಆರಂಭಿಸಿದ್ದಾರೆ.
ಈ ವಿಷಯ ಅಕ್ಕಪಕ್ಕದ ಗ್ರಾಮಗಳಿಗೆ ಹರಡುತ್ತಿದ್ದಂತೆ ಜನರು ತಂಡೋಪ ತಂಡವಾಗಿ ಆಗಮಿಸಿ ಉದ್ಭವ ಗಣೇಶನ ದರ್ಶನ ಪಡೆದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗಣಪನ ಪೂಜೆಯಿಂದ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದ ಕುಂಕುಮ, ಅರಿಶಿನ ಹಚ್ಚಿ ಭಕ್ತಿ ಭಾವದಿಂದ ಉದ್ಭವ ಗಣೇಶನ ಪೂಜೆ ಮಾಡಲಾಗುತ್ತಿದೆ.