ಚಿಕ್ಕಮಗಳೂರು: ಎಲ್ಲರೂ ಪೊಲೀಸರಿಗೆ ಭಯ ಪಟ್ರೆ ಕಾಫಿನಾಡಿನ ಆರಕ್ಷಕರು ವಾಸ್ತುವಿಗೆ ಹೆದರಿ ಠಾಣೆಯಲ್ಲೇ ಗಣಪತಿ ದೇವಾಲಯ ನಿರ್ಮಿಸಿದ್ದಾರೆ.
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಶ್ರಮಿಸುವ ಕಾಫಿನಾಡಿನ ಆರಕ್ಷಕರಿಗೆ ವಾಸ್ತು ದೋಷದಿಂದ ರಕ್ಷಣೆ ಬೇಕಾಗಿದ್ದು, ಠಾಣೆಯ ಆವರಣದಲ್ಲೇ ಗಣೇಶನ ದೇಗುಲ ಕಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯನ್ನ ವಾಸ್ತು ಪ್ರಕಾರ ಕಟ್ಟಿಲ್ಲವೆಂದು ಪೊಲೀಸರು ಠಾಣೆಯ ಎಡಭಾಗದಲ್ಲಿ ವಿಘ್ನ ನಿವಾರಕನ ಗುಡಿ ನಿರ್ಮಿಸಿದ್ದಾರೆ. ಈಗಾಗಲೇ ಗಣಪತಿ ದೇವಾಲಯ ಉದ್ಘಾಟನೆಗೆ ಸಿದ್ಧಗೊಂಡಿದ್ದು ಮಂಗಳವಾರ ಲೋಕಾರ್ಪಣೆಗೊಂಡಿದೆ.
ದೇವಾಸ್ಥಾನದ ಉದ್ಘಾಟನೆಗೆ ಪೊಲೀಸ್ ಠಾಣೆ ನವವಧುವಿನಂತೆ ಸಿಂಗಾರಗೊಂಡಿತ್ತು. ಪೊಲೀಸರು ದೇವಾಲಯದ ಆರಂಭದ ಕಾರ್ಯಕ್ರಮ ಕುರಿತು ಕರಪತ್ರಗಳನ್ನ ಮಾಡಿಸಿಯೂ ಹಂಚಿ ಸಾರ್ವಜನಿಕರನ್ನು ಆಹ್ವಾನಿಸಿದ್ದರು. ಸರ್ಕಾರಿ ಕಚೇರಿಗಳನ್ನು ವಾಸ್ತು ನೋಡಿಯೇ ಕಟ್ಟಬೇಕಾ? ಇದೊಂದು ಮೂಢನಂಬಿಕೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಪೊಲೀಸರ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv