ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿಂದು ಗಣೇಶ ಪ್ರತಿಷ್ಠಾಪನೆ- ಮೆರವಣಿಗೆ, ವಿಶೇಷ ಪೂಜೆಗೆ ಸಿದ್ಧತೆ

Public TV
1 Min Read
IDGAH MAIDAN HUBBALLI

– ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ (Idgah Maidan) ಇಂದು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಬೆಳಗ್ಗೆ 9.30ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಪ್ರತಿಷ್ಠಾಪನಾ ಗಣೇಶ ಮೂರ್ತಿ ಈದ್ಗಾ ಮೈದಾನಕ್ಕೆ ಕರೆಯಲಾಗುತ್ತದೆ. ಬಳಿಕ ಹಿಂದೂ ಮುಖಂಡರ ಸಮ್ಮುಖದಲ್ಲಿ ಗಣೇಶ ಮೂರ್ತಿ (Ganesha Idol) ಪ್ರತಿಷ್ಠಾಪನೆಯಾಗಲಿದೆ. ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಿದೆ. ತದನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಮೈದಾನದಲ್ಲಿ ನಮಾಝ್ ಮಾಡುವ ಸ್ಥಳ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಮಧ್ಯೆ ಟೀನ್ ಶೀಟ್ ಹಾಕಿ ಅದರ ಮೇಲೆ ಪರದೆ ಕಟ್ಟಲಾಗಿದೆ. ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಿದೆ. ಮೈದಾನದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಆರಂಭಿಸಲಾಗಿದೆ. ಖಾಕಿಪಡೆ ಫುಲ್ ಹೈಅಲರ್ಟ್ ಆಗಿದ್ದು, ಶಾಂತಿ ಭಂಗ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಮೇಲೆ ಮತ್ತೊಂದು FIR – ಸನಾತನ ಧರ್ಮ ಬಟ್ಟೆ ಮಳಿಗೆ ಪ್ರಕರಣದಲ್ಲೂ ವಂಚನೆ

ಹಿಂದೂ ಸಂಘಟನೆಗಳು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಪೂಜೆ ಜೊತೆಗೆ ಮೈದಾನ ಶುದ್ಧಿ ಪೂಜೆ ಮಾಡಿ ಮಂಟಪ ಸಿದ್ಧಪಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ. ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.. ರಾಜ್ಯದ ಹೆಸರಾಂತ ಸ್ವಾಮಿಗಳು, ಹಿಂದೂಪರ ಮುಖಂಡರು ಭೇಟಿ ನೀಡಲಿದ್ದಾರೆ.. ಒಟ್ನಲ್ಲಿ ಇಂದು ನಿರ್ವಿಘ್ನವಾಗಿ ವಿನಾಯಕ ಪ್ರತಿಷ್ಠಾಪನೆಯಾಗಲಿ, ಹುಬ್ಬಳ್ಳಿ ಶಾಂತಿ ತವರು ಎಂಬ ಸಂದೇಶ ಎಲ್ಲ ಕಡೆ ಹಬ್ಬಲಿ ಎಂಬುವುದು ಇಲ್ಲಿನ ಜನರ ಆಶಯ.

Web Stories

Share This Article