ಕರ್ನಾಟಕದ ಪ್ರತಿ ಸ್ಥಳಕ್ಕೂ ರಾಮಾಯಣಕ್ಕೂ ಒಂದಲ್ಲ ಒಂದು ರೀತಿಯ ಸಂಬಂಧವಿದೆ. ಅದೇ ರೀತಿ ರಾಮಾಯಣದ ಕಾಲದಲ್ಲಿ ಕರ್ನಾಟಕದ ಹಲವೆಡೆ ಬಂದಿರುವ ಬಗ್ಗೆ ಪುರಾಣದಲ್ಲಿ, ಜನಪದದಲ್ಲಿ ಅನೇಕ ಉಲ್ಲೇಖಗಳಿವೆ. ಅದೇ ರೀತಿ ಶಿವಮೊಗ್ಗದ ಹೊಸನಗರ ತಾಲೂಕಿನ ಕಾರಣಗಿರಿಯಲ್ಲಿ (Karanagiri) ಶ್ರೀರಾಮ ಸೀತೆಯನ್ನು ರಾವಣನ ಸೆರೆಯಿಂದ ಕರೆತರುವ ಮುನ್ನ ಹಾಗೂ ಕರೆದು ಮರಳುವಾಗ ಪೂಜಿಸಿದ್ದ ಎಂಬ ಕಥೆ ಸಹ ಇದೆ.
ಪುರಾಣ ಕಾಲದಲ್ಲಿ ಅಗಸ್ತ್ಯ ಮಹರ್ಷಿಗಳು ಕಾರಣಗಿರಿಯಲ್ಲಿ ಬಹುಕಾಲ ನೆಲೆನಿಂತು ಈಗಿನ ದೇಗುಲದ ಎದುರಿನ ಪುಷ್ಕರಣಿಯಲ್ಲಿ ವರಸಿದ್ಧಿವಿನಾಯಕ ಸ್ವಾಮಿಯ ವಿಗ್ರಹವನ್ನಿಟ್ಟು ಆರಾಧಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಹಲವು ವರ್ಷಗಳ ನಂತರ ಪುಷ್ಕರಣಿಯಿಂದ ಮೇಲ್ಭಾಗಕ್ಕೆ ತಂದು ಈಗಿರುವ ದೇವಾಲಯದ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ನಾಂದಿ ಹಾಕಿಕೊಟ್ಟರಂತೆ.
Advertisement
ರಾಮಾಯಣ ಕಾಲದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದನಂತೆ. ಈ ವೇಳೆ ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೊಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ. ರಾವಣಾದಿಗಳನ್ನು ಮರ್ದಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುವ ಸಂತಸದಲ್ಲಿ ಇದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತನು. ಮುಂದಕ್ಕೆ ಪ್ರಯಾಣಿಸುತ್ತಿದ್ದಂತೆ ಶ್ರೀರಾಮ ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟ(ಗಿರಿ)ಅಡ್ಡ ನಿಂತಿತು. ಆಗ ಶ್ರೀರಾಮನು ಕಿಂ ಕಾರಣಂ ಗಿರಿಃ (ಈ ಬೆಟ್ಟ ಅಡ್ಡವೇಕೆ) ಎಂದನಂತೆ. ಇದೇ ಕಾರಣಕ್ಕೆ ಈ ಸ್ಥಳಕ್ಕೆ ಕಾರಣಗಿರಿ ಎಂಬ ಹೆಸರು ಬಂದಿದೆ.
Advertisement
ಬಳಿಕ ಜೊತೆಗಿದ್ದ ಲಕ್ಷ್ಮಣ ಅಗಸ್ತ್ಯರ ಮಾತನ್ನು ರಾಮನಿಗೆ ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ. ನಂತರ ಶ್ರೀರಾಮ ಸೀತಾ ಸಹಿತನಾಗಿ ಬಂದು ಈ ದೇವರಿಗೆ ಪೂಜೆ ಸಲ್ಲಿಸಿ ಮುಂದೆ ಪ್ರಯಾಣ ಬೆಳೆಸಿ 2 ಕಿ.ಮೀ.ದೂರದ ಸ್ಥಳದಲ್ಲಿ ಶ್ರೀರಾಮಚಂದ್ರಾಪುರದಲ್ಲಿ ವಿಶ್ರಾಂತಿಗೆ ಉಳಿದನು. ಆತ ತಂಗಿದ್ದ ಆ ಸ್ಥಳ ಶ್ರೀರಾಮಚಂದ್ರಾಪುರ ಎಂದು ಪ್ರಸಿದ್ಧವಾಯಿತು. ಶಂಕಾರಾಚಾರ್ಯರ ಶಿಷ್ಯರಿಂದ ಈ ಸ್ಥಳದಲ್ಲಿ ಮಠ ಸ್ಥಾಪನೆಯಾಗಿ ಈಗ ಶ್ರೀರಾಮಚಂದ್ರಾಪುರ ಮಠ ಎಂದು ಪ್ರಸಿದ್ಧಿಯಾಗಿದೆ.
Advertisement
Advertisement
ಪ್ರತಿ ವರ್ಷ ರಾಮ ನವಮಿಯಂದು ರಾಮಚಂದ್ರಾಪುರ ಮಠದಲ್ಲಿ ಮಹಾರಥೋತ್ಸವ ಜರುಗುತ್ತದೆ. ರಥೋತ್ಸವದ ಹಿಂದಿನ ದಿನ ಶ್ರೀರಾಮ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ 2 ಕಿ.ಮೀ.ದೂರದ ಈ ದೇಗುಲಕ್ಕೆ ಆಗಮಿಸಿ ಪೂಜೆ ನಡೆಯುತ್ತದೆ. ಇದು ಶ್ರೀರಾಮನಿಗೂ ಇಲ್ಲಿನ ವಿನಾಯಕನಿಗೂ ಇರುವ ಸಂಬಂಧದ ಕುರುಹಾಗಿದೆ.
ಇತ್ತೀಚೆಗೆ ವರ್ಷಾನುವರ್ಷ ಸತತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಈ ದೇಗುಲ ದಿನಂಪ್ರತಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಪ್ರತಿ ಸಂಕಷ್ಠಿಯಂದು 48 ಕಾಯಿಗಳಿಗೆ ಕಡಿಮೆಯಿಲ್ಲದಷ್ಟು ಸಾಮೂಹಿಕ ಗಣ ಹೋಮ ನಡೆಯುತ್ತದೆ. ದೇಗುಲದ ಆವರಣದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವಿದ್ದು ಹಲವು ಶುಭ ಸಮಾರಂಭಗಳು ಜುರುಗುತ್ತಿರುತ್ತವೆ.
ಇಲ್ಲಿನ ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ.