ಗಣಪತಿ ಮೂರ್ತಿ 2-4 ಅಡಿ ನಿರ್ಬಂಧ ಹಿಂಪಡೆಯಲು ಸರ್ಕಾರಕ್ಕೆ ಡಿಕೆಶಿ ಆಗ್ರಹ

Public TV
2 Min Read
DK SHIVAKUMAR 1

ಬೆಂಗಳೂರು: ‘ಗಣೇಶ ಹಬ್ಬಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ರಾಜ್ಯ ಸರ್ಕಾರ ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಗಣೇಶ ಮೂರ್ತಿ ಇಡಬೇಕೆಂಬ ಅರ್ಥಹೀನ ನಿರ್ಬಂಧ ಹೇರುವ ಮೂಲಕ ಮೂರ್ತಿ ತಯಾರಕರ ಬದುಕಿನ ಜತೆ ಚೆಲ್ಲಾಟವಾಡಿದೆ. ತಕ್ಷಣ ಈ ಆದೇಶ ಹಿಂಪಡೆಯಬೇಕು ಅಥವಾ ಮೂರ್ತಿ ತಯಾರಿಕರಿಗೆ ಪರಿಹಾರ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

‘ಕಳೆದ 2 ತಿಂಗಳಿಂದ ಗಣೇಶ ಮೂರ್ತಿ ತಯಾರಕರು ಲಕ್ಷಾಂತರ ಮೂರ್ತಿಗಳನ್ನು ಮಾಡಿದ್ದಾರೆ. ಸರ್ಕಾರ ಕೊನೆ ಕ್ಷಣದಲ್ಲಿ ಇಂತಹ ನಿರ್ಬಂಧ ಹೇರಿದರೆ ಅವರ ಸ್ಥಿತಿ ಏನಾಗಬೇಕು? ಸರ್ಕಾರ ಇದನ್ನೇ ಎರಡು ಮೂರು ತಿಂಗಳ ಹಿಂದೆಯೇ ಹೇಳಿದ್ದರೆ, ಮೂರ್ತಿ ತಯಾರಕರು ದೊಡ್ಡ ಮೂರ್ತಿಗಳನ್ನು ಮಾಡುತ್ತಲೇ ಇರಲಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

GANESHA2

‘ಕೋವಿಡ್ ಸಮಯದಲ್ಲಿ ಆದಾಯವಿಲ್ಲದಿದ್ದ ಗಣೇಶ ಮೂರ್ತಿ ತಯಾರಕರು, ತಮ್ಮ ಬಳಿ ಇದ್ದಬದ್ದ ಹಣ ಹಾಕಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಈ ನಿಬರ್ಂಧ ಹೇರಿದರೆ ಅವರು ಎಲ್ಲಿಗೆ ಹೋಗಬೇಕು? ಸರ್ಕಾರ ಇದುವರೆಗೂ ಇವರಿಗೆ ನಯಾ ಪೈಸೆ ಕೋವಿಡ್ ಪರಿಹಾರ ಕೊಟ್ಟಿಲ್ಲ. ಹೀಗಿರುವಾಗ ಈ ರೀತಿ ನಿರ್ಬಂಧ ಎಷ್ಟು ಸರಿ? ದೇವರ ಮೂರ್ತಿ ಮಾಡಿಕೊಂಡು ಜೀವನ ನಡೆಸುವವರ ಬದುಕಿಗೆ ಸರಕಾರ ಕೊಳ್ಳಿ ಇಟ್ಟಿದೆ ಎಂದು ಆಕ್ರೋಶ ಅವರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಭಿಮನ್ಯು ಟೀಂಗೆ ಹೊಸ ಮೆಂಬರ್ ಎಂಟ್ರಿ- ಅಶ್ವತ್ಥಾಮ ಭವಿಷ್ಯದ ಕ್ಯಾಪ್ಟನ್!

‘ರಾಜ್ಯ ಸರ್ಕಾರ ಗಣಪತಿ ಉತ್ಸವಕ್ಕೆ ಕಡಿವಾಣ ಹಾಕುವ ಭರದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಕಂದಕ ನಿರ್ಮಿಸಿರುವುದು ದುರಾದೃಷ್ಟಕರ ಸಂಗತಿ. ಗಣೇಶ ಪ್ರತಿಮೆಯನ್ನು ಮನೆಯಲ್ಲಿ 2 ಅಡಿ, ಸಾರ್ವಜನಿಕ ಪ್ರದೇಶದಲ್ಲಿ 4 ಅಡಿಗೆ ಸೀಮಿತಗೊಳಿಸಿ, ದೇವರಿಗೂ ನೀನು ಇಷ್ಟೇ ಎತ್ತರ ಇರಬೇಕು ಎಂದು ನಿಯಂತ್ರಣ ಹೇರುತ್ತಿದ್ದಾರೆ’ ಎಂದು ಕುಟುಕಿದ್ದಾರೆ.

rcr ganesh festival 2 1

‘ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು, ಮೆರವಣಿಗೆ ಮಾಡಬಾರದು ಎಂಬುದನ್ನು ಒಪ್ಪುತ್ತೇವೆ. ಆದರೆ ಗಣೇಶನ ಪ್ರತಿಮೆ 2-4 ಅಡಿಯೇ ಇರಬೇಕು ಎಂಬ ನಿರ್ಬಂಧದ ಹಿಂದೆ ಯಾವ ತರ್ಕ ಇದೆ? ಹಿಂದೂ ಸಂಸ್ಕೃತಿ ವಕ್ತಾರರು ಎಂದು ಹೇಳಿಕೊಳ್ಳುವವರು ಮಾಡುವ ಕೆಲಸ ಇದೇನಾ?’ ಎಂದು ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

‘ಸರ್ಕಾರ ಅಂತಿಮ ಗಳಿಗೆಯಲ್ಲಿ ಈ ನಿರ್ಧಾರ ತೆಗೆದುಕೊಂಡರೆ, ಈಗ ಮಾಡಿರುವ ಮೂರ್ತಿಗಳನ್ನು ನಿರ್ಧಾರ ಪ್ರಕಟಿಸಿರುವವರ ಮನೆ ಮುಂದೆ ಇಡಬೇಕಾ? ನಿರ್ಧಾರ ಪ್ರಕಟಿಸಿರುವವರೇ ಇವುಗಳನ್ನು ಖರೀದಿಸಲಿ ಎಂದು ಒತ್ತಾಯಿಸಿದ್ದಾರೆ.

rcr ganesh festival 2 6

ಸರಕಾರದ ಈ ತಿಕ್ಕಲುತನದ ನಿರ್ಧಾರ “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬಂತಿದೆ ಎಂದು ಅವರು ಟೀಕಿಸಿದ್ದಾರೆ. ಇದನ್ನೂ ಓದಿ: ಹೊಂದಾಣಿಕೆ ಕೊರತೆ, 8 ಸ್ಥಾನ ಕಳೆದುಕೊಂಡ ಕಾಂಗ್ರೆಸ್ – ಸತೀಶ್ ಆತ್ಮಾವಲೋಕನ

ನಾವು ಕೋವಿಡ್ ನಿಯಮದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ, ಸರ್ಕಾರದ ಅವೈಜ್ಞಾನಿಕ ತೀರ್ಮಾನ ಪ್ರಶ್ನಿಸುತ್ತಿದ್ದೇವೆ. ಈ ವೃತ್ತಿ ಅವಲಂಬಿಸಿರುವವರ ಬದುಕು ಬೀದಿ ಪಾಲಾಗಬಾರದು. ಗಣೇಶ ಹಬ್ಬಕ್ಕೆ ಇನ್ನು ಎರಡು ದಿನ ಕಾಲಾವಕಾಶ ಇದೆ. ಸರ್ಕಾರ ಈ ಅರ್ಥಹೀನ ನಿಬರ್ಂಧ ವಾಪಸ್ ಪಡೆಯಬೇಕು ಅಥವಾ ಮೂರ್ತಿ ತಯಾರಕರಿಗೆ ಪರಿಹಾರ ನೀಡಬೇಕು’ ಎಂದು ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *