ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಮೊದಲು ನೆನಪಾಗುವುದೇ ವಿಘ್ನ ನಿವಾರಕ ವಿನಾಯಕ. ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಗಣಪತಿಗೆ ಅಗ್ರ ಸ್ಥಾನವಿದೆ. ಆದ ಕಾರಣ ವಿಘ್ನ ವಿನಾಯಕನಿಗೆ ಯಾವುದೇ ಸಂದರ್ಭದಲ್ಲೂ ಮೊದಲ ಪೂಜೆ ಸಲ್ಲುತ್ತದೆ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನದಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.
ಗಣೇಶ ಹಬ್ಬ ಬಂದರೆ ಎಲ್ಲರಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡುತ್ತದೆ. ಗಣೇಶನನ್ನು ಕೂರಿಸುವಾಗ ಮನೆಗೆ ಅತಿಥಿಯ ಆಗಮನ ಹೇಗಿರುತ್ತದೆಯೋ ಹಾಗೆಯೆ ಭಾಸವಾಗುತ್ತದೆ. ಗಣೇಶನ ವಿರ್ಸಜನೆಯು ಅತಿಥಿಗಳ ನಿರ್ಗಮನದ ಹಾಗೇ ನೋವನ್ನು ಕೂಡ ನೀಡುತ್ತದೆ.
ಪ್ರತಿ ವರ್ಷದ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಸಾಧಾರಣವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶನ ಹಬ್ಬ ಬರುತ್ತಿರುತ್ತದೆ.
ಕೆಲವರು 3, 5, 7, 11 ದಿನಗಳ ಕಾಲ ಗಣಪತಿ ಪೂಜಿಸುತ್ತಾರೆ. ಗಣೇಶನ ಜನನ ಕುರಿತು ಪುರಾಣ, ಮಹಾಕಾವ್ಯಗಳು ವಿವಿಧ ರೀತಿಯ ಕಥೆಯನ್ನು ತಿಳಿಸುತ್ತದೆ. ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಎಂಬ ಕಥೆಯಿದೆ.
ಗಣೇಶನನ್ನು ವಿಸರ್ಜನೆ ಮಾಡುವಾಗ ಅವನ ನಿರ್ಗಮನವು ದುಃಖವನ್ನು ತರುತ್ತದೆ. ಆದರೆ ವರ್ಷಕ್ಕೊಮ್ಮೆ ಭೇಟಿ ನೀಡುವ ಕುಟುಂಬದ ಸದಸ್ಯ ಎಂದು ಪರಿಗಣಿಸಿ ಕಳುಹಿಸಿಕೊಡಲಾಗುತ್ತದೆ
ಗಣೇಶನ ವಿಸರ್ಜನೆ ಎನ್ನುವುದು ಗಣೇಶನ ವಿಗ್ರಹವನ್ನು ನದಿ, ಸಮುದ್ರ ಅಥವಾ ಯಾವುದೇ ಜಲಧಾರೆಯಲ್ಲಿ ಮುಳುಗಿಸುವ ಆಚರಣೆಯಾಗಿದೆ. ಈ ಮೂಲಕ ಕೈಲಾಸ ಪರ್ವತದಲ್ಲಿರುವ ತನ್ನ ಮನೆಗೆ ಗಣೇಶ ಮರಳಿ ಶಿವ ಮತ್ತು ಪಾರ್ವತಿಯನ್ನು ಮತ್ತೆ ಸೇರುತ್ತಾನೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ಗೌರಿ ವಿಸರ್ಜನೆಯನ್ನು, ಗಣೇಶ ವಿಸರ್ಜನೆಯೊಂದಿಗೆ ಮಾಡಲಾಗುತ್ತದೆ.
ಗಣೇಶ ವಿಸರ್ಜನೆಯು ಜನನ ಮತ್ತು ಮರಣದ ಚಕ್ರದ ಸಂಕೇತವಾಗಿದೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ ಮತ್ತು ಬದಲಾವಣೆಯಲ್ಲಿಯೂ ನಾವೆಲ್ಲರೂ ಬದುಕಬೇಕು. ಈ ಭೂಮಿಯ ಮೇಲೆ ಜನಿಸಿದವರಿಗೆ ಸಾವು ನಿಶ್ಚಿತ ಎಂದು ಹಲವು ವಿದ್ವಾಂಸರು ವ್ಯಾಖ್ಯಾನಗಳನ್ನು ನೀಡಿದ್ದಾರೆ.