ಮಹಾಭಾರತ (Mahabharata) ಯುದ್ಧ ಮುಗಿದ ನಂತರ ವೇದವ್ಯಾಸರು (Vedavyasa) ಹಿಮಾಲಯದಲ್ಲಿ ಧ್ಯಾನ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸೃಷ್ಟಿಕರ್ತ ಬ್ರಹ್ಮ ಮಹಾಭಾರತ ಮಹಾಕಾವ್ಯವನ್ನು ಬರೆಯುವಂತೆ ಹೇಳುತ್ತಾನೆ. ಸಂಪೂರ್ಣ ಯುದ್ಧವನ್ನು ವೀಕ್ಷಿಸಿದ್ದರಿಂದ ಮತ್ತು ಎಲ್ಲಾ ಪಾತ್ರಗಳನ್ನು ವೈಯಕ್ತಿಕವಾಗಿ ತಿಳಿದಿದ್ದರಿಂದ ನೀವೇ ಕಥೆ ಬರೆಯಲು ಸೂಕ್ತ ವ್ಯಕ್ತಿ ಎಂದು ಸೂಚಿಸುತ್ತಾನೆ.
ಮಹಾಭಾರತ ಸಾಮಾನ್ಯ ಕಥೆಯಲ್ಲ ಎಂಬುದು ವೇದವ್ಯಾಸರಿಗೆ ಗೊತ್ತಿತ್ತು. ಇದು ಸಂಕೀರ್ಣ ಮತ್ತು ದೀರ್ಘವಾಗಿರಲಿದೆ ಎನ್ನುವುದು ತಿಳಿದಿತ್ತು. ನಾನು ಬರೆದರೆ ಬಹಳ ಸಮಯ ಬೇಕಾಗಬಹುದು ಎನ್ನುವುದರನ್ನು ಅರಿತ ವೇದವ್ಯಾಸರು ಸಮರ್ಥ ಕಥೆ ಬರೆಯುವವರಿಗೆ ಹುಡುಕಾಟ ನಡೆಸುತ್ತಿದ್ದರು. ಕೊನೆಗೆ ತಮ್ಮ ಮಹಾಜ್ಞಾನದಿಂದ ಗಣಪತಿಯಿಂದ (Ganapathi) ಮಾತ್ರ ಬರೆಯಲು ಸಾಧ್ಯ ಎಂದು ತಿಳಿದು ಆತನನ್ನು ಸಂಪರ್ಕಿಸುತ್ತಾರೆ.
ವ್ಯಾಸರ ಮನವಿಯನ್ನು ಒಪ್ಪಿದರೂ ಗಣೇಶ ಎರಡು ಷರತ್ತನ್ನು ವಿಧಿಸುತ್ತಾನೆ. ವಿರಾಮವಿಲ್ಲದೆ ಸಂಪೂರ್ಣವಾಗಿ ಕಥೆಯನ್ನು ಹೇಳಬೇಕು. ಒಂದು ವೇಳೆ ವಿರಾಮ ನೀಡಿ ನಿಲ್ಲಿಸಿದರೆ ನಾನು ಮಧ್ಯದಲ್ಲೇ ಕಥೆ ಬರೆಯುವುದನ್ನು ನಿಲ್ಲಿಸುತ್ತೇನೆ ಎಂದು ಷರತ್ತನ್ನು ಹಾಕುತ್ತಾನೆ. ಈ ಷರತ್ತನ್ನು ವೇದವ್ಯಾಸರು ಒಪ್ಪಿದ ನಂತರ ಅವರು ಗಣೇಶನಿಗೆ, ಕಥಾವಸ್ತು ಅಥವಾ ವಾಕ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಬರೆಯುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಈ ಷರತ್ತನ್ನು ಒಪ್ಪಿದ ನಂತರ ಶುಭ ಮುಹೂರ್ತದಲ್ಲಿ ಲಿಪಿಕಾರ ಗಣಪತಿಗೆ ವಂದಿಸಿ ವ್ಯಾಸರು ಕಥೆ ಹೇಳಲು ಶುರು ಮಾಡುತ್ತಾರೆ. ಇದನ್ನೂ ಓದಿ: ಒಂದೇ ಕಿವಿ, ಕಾಲು, ಅರ್ಧ ಹೊಟ್ಟೆ! – ಈ ಗಣಪನ ವಿಶೇಷವೇನು?
ಗಣೇಶ ಬಹಳ ವೇಗವಾಗಿ ಮಹಾಕಾವ್ಯವನ್ನು ಬರೆಯುತ್ತಿದ್ದ. ಇದರಿಂದಾಗಿ ವೇದವ್ಯಾಸರಿಗೆ ಸ್ವಲ್ಪ ಕಷ್ಟವಾಯಿತು. ಕಷ್ಟವಾಯಿತು ಅಂತ ನಿಲ್ಲಿಸಿದರೆ ಗಣೇಶ ಕಾವ್ಯ ಬರೆಯುವುದನ್ನು ನಿಲ್ಲಿಸುತ್ತಾನೆ ಎನ್ನುವುದನ್ನು ಅರಿತಿದ್ದ ವೇದವ್ಯಾಸರು ಮಧ್ಯೆ ಮಧ್ಯೆ ಉದ್ದೇಶಪೂರ್ವಕವಾಗಿ ಕೆಲವು ಕ್ಲಿಷ್ಟಕರ ವಾಕ್ಯಗಳನ್ನು ಹೇಳತೊಡಗಿದರು. ಇದರಿಂದಾಗಿ ಗಣೇಶ ಅರ್ಥಮಾಡಿಕೊಂಡು ಅದನ್ನು ಬರೆಯುವಷ್ಟರಲ್ಲಿ ಕೆಲ ಸಮಯ ತೆಗೆದುಕೊಳ್ಳುತ್ತಿದ್ದ. ಇದರಿಂದಾಗಿ ವೇದವ್ಯಾಸರಿಗೆ ಸ್ವಲ್ಪ ಸಮಯ ಸಿಗುತ್ತಿತ್ತು. ಈ ಸಮಯದಲ್ಲಿ ಅವರು ಮುಂದಿನ ಕಥೆಯನ್ನು ನೆನಪು ಮಾಡಿಕೊಂಡು ಹೇಳುತ್ತಿದ್ದರು..
ಗಣೇಶ ವೇಗವಾಗಿ ಬರೆಯುತ್ತಿದ್ದಾಗ ಲೇಖನಿ ತುಂಡಾಗುತ್ತದೆ. ಈ ವೇಳೆ ಏನು ಮಾಡುವುದು ಎಂದು ತಿಳಿಯದೇ ಇದ್ದಾಗ ಬುದ್ಧಿವಂತನಾಗಿದ್ದ ಗಣೇಶ ತನ್ನ ದಂತವನ್ನು ಮುರಿದು ಅದನ್ನು ಲೇಖನಿಯನ್ನಾಗಿ ಮಾಡಿ ಕಥೆ ಬರೆಯುವುದನ್ನು ಮುಂದುವರಿಸಿದ. ಗಣೇಶ ತನ್ನ ದಂತ ಮುರಿಯಲು ಕಾರಣ ಆತನೇ ವಿಧಿಸಿದ ಷರತ್ತು. ವಿರಾಮವಿಲ್ಲದೇ ಹೇಳಿದರೆ ಮಾತ್ರ ನಾನು ಕಥೆ ಬರೆಯುತ್ತೇನೆ ಎಂದು ಹೇಳಿದ್ದರಿಂದ ಆತ ಬೇರೆ ಲೇಖನಿಯ ಮೊರೆ ಹೋಗದೇ ತನ್ನ ದಂತವನ್ನೇ ತುಂಡರಿಸಿ ಅದನ್ನು ಲೇಖನಿಯನ್ನಾಗಿ ಮಾಡಿದ್ದ. ಈ ಕಾರಣಕ್ಕೆ ಗಣೇಶನಿಗೆ ʼಏಕದಂತʼ ಎಂಬ ಹೆಸರು ಬಂದಿದೆ ಎಂದು ಪುರಾಣ ಕಥೆಯಿದೆ.
ಮಹಾಭಾರತ 18 ಪರ್ವಗಳನ್ನು ಒಳಗೊಂಡಿದ್ದು ಇದರಲ್ಲಿ ಆದಿ ಪರ್ವ ಮೊದಲನೆಯದ್ದು. ಆದಿ ಪರ್ವದ ಮೊದಲ ಅಧ್ಯಾಯದಲ್ಲಿ ವ್ಯಾಸರು ಮಹಾಭಾರತವನ್ನು ಹೇಗೆ ನಿರ್ದೇಶಿಸಿದರು ಮತ್ತು ನಂತರ ಅದನ್ನು ಬರೆದದ್ದು ಹೇಗೆ ಎನ್ನುವುದನ್ನು ವಿವರಿಸುತ್ತದೆ.