ದೇಶದೆಲ್ಲೆಡೆ ಗಣೇಶ ಚತುರ್ಥಿ (Ganesha Chaturthi) ಸಂಭ್ರಮ ಮನೆ ಮಾಡಿದೆ. ಈ ಹಬ್ಬ ವರ್ಣರಂಜಿತ ಅಲಂಕಾರಗಳು, ಭಕ್ತಿಪೂರ್ವಕ ಪ್ರಾರ್ಥನೆಗಳು ಮತ್ತು ಸಂತೋಷದಾಯಕ ಸಮುದಾಯ ಕೂಟಗಳಿಂದ ಹೆಚ್ಚು ಜನಜನಿತ. ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯ ಮನೋಭಾವವನ್ನು ಹಬ್ಬ ಪ್ರತಿಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆ ಸಾರುವ, ಒಗ್ಗಟ್ಟಿನ ಪ್ರತೀಕ ಗೌರಿ-ಗಣೇಶ ಹಬ್ಬ. ವಿಘ್ನೇಶ್ವರನನ್ನು ಪೂಜಿಸಿದರೆ ಸಕಲ ವಿಘ್ನಗಳು ನಿವಾರಣೆಯಾಗುತ್ತೆಂಬ ನಂಬಿಕೆ ಹಿಂದೂಗಳಲ್ಲಿದೆ. ಯುವ ಮನಸ್ಸುಗಳಿಗಂತೂ ದೇವ ಗಜಮುಖ ಸ್ಪೂರ್ತಿಯ ಚಿಲುಮೆ. ಗಲ್ಲಿ ಗಲ್ಲಿಗಳಲ್ಲಿ, ಏರಿಯಾಗಳಲ್ಲಿ ಗಣೇಶನನ್ನು ಕೂರಿಸಿ ಯುವಸಮೂಹ ಸಂಭ್ರಮಿಸುತ್ತದೆ.
ಹಬ್ಬದ ಸಂಭ್ರಮ-ಸಡಗರದಲ್ಲಿ ಮಿಂದೇಳುವ ನಾವು ಪ್ರಕೃತಿಯ ಬಗೆಗಿನ ಕಾಳಜಿಯನ್ನು ಮರೆಯುತ್ತಿದ್ದೇವೆ. ನಮ್ಮನ್ನೂ, ನಮ್ಮ ಸುತ್ತಮುತ್ತಲ ಜನರನ್ನು ಚೆನ್ನಾಗಿಡಪ್ಪ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅಂತೆಯೇ ನಮ್ಮನ್ನು ಪೊರೆವ ಪರಿಸರವನ್ನೂ ಕಾಪಾಡಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಈ ಬಗ್ಗೆ ಸರ್ಕಾರಗಳು ಕಾಲಕಾಲಕ್ಕೆ ಜಾಗೃತಿ ಮೂಡಿಸುತ್ತಲೇ ಬಂದಿವೆ. ಆದ್ದರಿಂದ ನಮ್ಮ ಹಬ್ಬ-ಆಚರಣೆ-ಸಂಭ್ರಮ ಪರಿಸರಕ್ಕೆ ಪೂರಕವಾಗಿದ್ದರೆ ಸೊಗಸಾಗಿರುತ್ತದೆ. ಇದನ್ನೂ ಓದಿ: ಶ್ರೀಮಂತ ಗಣಪನಿಗೆ ಈ ಬಾರಿ 400 ಕೋಟಿ ರೂ. ವಿಮೆ – ಏನಿದ್ರ ವಿಶೇಷತೆ ಅಂತೀರಾ?
Advertisement
Advertisement
ಗೌರಿ-ಗಣೇಶ ಹಬ್ಬದಲ್ಲಂತೂ ಪಿಒಪಿ ಮೂರ್ತಿಗಳೇ ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ಇದರಿಂದ ಪರಿಸರ, ಜಲಮಾಲಿನ್ಯ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರಗಳು ಪರಿಸರ ಸ್ನೇಹಿ ಗಣೇಶ ಕೂರಿಸಿ ಹಬ್ಬ ಆಚರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಪಿಒಪಿ ಗಣೇಶ ಮೂರ್ತಿ ಮಾರುವವರ ವಿರುದ್ಧ ಕ್ರಮಕೈಗೊಳ್ಳುತ್ತಿವೆ. ಆದರೂ ಪಿಒಪಿ ಗಣೇಶ ಮೂರ್ತಿ (POP Ganesha Idol) ಮಾರಾಟ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ.
Advertisement
ಅಷ್ಟಕ್ಕೂ ಪಿಒಪಿ ಮೂರ್ತಿಗಳನ್ನು ಯಾಕೆ ಕೂರಿಸಬಾರದು? ಪರಿಸರ ಸ್ನೇಹಿ ಮೂರ್ತಿಗಳನ್ನು ಕೂರಿಸಿ ಗಣೇಶ ಚತುರ್ಥಿ ಹಬ್ಬ ಆಚರಿಸುವುದರಿಂದ ಆಗುವ ಪ್ರಯೋಜನಗಳೇನು? ಇದನ್ನೂ ಓದಿ: ವಿಘ್ನೇಶ್ವರನ ಪೂಜೆಗೆ ಗರಿಕೆ ಯಾಕೆ ಬೇಕು? – ಇದರ ಹಿಂದಿದೆ ಐತಿಹಾಸಿಕ ಕಥೆ!
Advertisement
ಜಲಸಂಪನ್ಮೂಲ ಉಳಿಸೋಣ:
ಗಣೇಶ ಚತುರ್ಥಿ ಎಂದರೆ ಗಣೇಶನ ಮೂರ್ತಿಗಳನ್ನು ಕೂರಿಸಿ, ಪೂಜೆ-ಪುನಸ್ಕಾರ ಮಾಡಿ, ಹಬ್ಬದೂಟ ಮಾಡಿ, ನಂತರ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವ ಹಬ್ಬ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (POP) ತಯಾರಿಸಿದ ಮೂರ್ತಿಗಳು ಜೈವಿಕ ವಿಘಟನೀಯವಲ್ಲ. ಜಲಮಾಲಿನ್ಯವಾಗುವುದರೊಂದಿಗೆ ಜಲಚರಗಳಿಗೆ ಹಾನಿ ಉಂಟು ಮಾಡುತ್ತದೆ. ನೀರಿನಲ್ಲಿ ನಾಶಕಾರಿ ವಸ್ತು ಹೆಚ್ಚುತ್ತದೆ. ಆದರೆ ಪರಿಸರ ಸ್ನೇಹಿ ಮೂರ್ತಿಗಳು ಜಲಚರಗಳಿಗೆ ಹಾನಿ ಮಾಡುವುದಿಲ್ಲ.
ಮನುಕುಲದ ಆರೋಗ್ಯ ಕಾಳಜಿ ಇರಲಿ:
ಜೈವಿಕ ವಿಘಟನೀಯವಲ್ಲದ ವಿಗ್ರಹಗಳನ್ನು ಬಳಸುವುದರಿಂದ ನೀರು ಮಲೀನವಾಗುತ್ತದೆ. ಅದನ್ನು ಬಳಸುವ ಜನರಲ್ಲಿ ಸೋಂಕುಗಳು ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಹಾನಿಕಾರಕ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಇತರ ಹಾನಿಕಾರಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಸಾವಯವ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸುವುದು ಉತ್ತಮ ಪರ್ಯಾಯವಾಗಿದೆ. ಸಾಮಾನ್ಯವಾಗಿ, ಗಣೇಶ ಮೂರ್ತಿಗಳನ್ನು ತಯಾರಿಸಲು ಬಳಸುವ ವಸ್ತುವು ನೀರನ್ನು ಕಲುಷಿತಗೊಳಿಸುವ ವಿವಿಧ ಲೋಹಗಳನ್ನು ಹೊಂದಿರುತ್ತದೆ. ಪರಿಸರ ಸ್ನೇಹಿ ಮೂರ್ತಿಯನ್ನು ಬಳಸುವುದರಿಂದ ಯಾವುದೇ ಸಮಸ್ಯೆ ಉದ್ಭವವಾಗಲ್ಲ. ಇದನ್ನೂ ಓದಿ: ಗುಡಿ ಗೋಪುರವಿಲ್ಲದ ʼಸೌತಡ್ಕ ಮಹಾಗಣಪತಿʼಗೆ ಬಯಲೇ ಆಲಯ!
ಗಣೇಶ ಮೂರ್ತಿಗಳನ್ನು ಅಲಂಕರಿಸಲು ಅನೇಕ ಲೋಹಗಳನ್ನು ಬಳಸಲಾಗುತ್ತದೆ. ಅವು ರಾಸಾಯನಿಕಗಳ ಉಪಸ್ಥಿತಿಯಿಂದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳಲ್ಲಿ ಹಾಗಲ್ಲ.
ಮೂರ್ತಿ ತಯಾರಿಕೆಯೂ ಸುಲಭ:
ಪಿಒಪಿ ಗಣೇಶನ ಮೂರ್ತಿಗೆ ತಯಾರಕರನ್ನು ಜನ ಅವಲಂಬಿಸಬೇಕಾಗುತ್ತದೆ. ಆದರೆ ಪರಿಸರ ಸ್ನೇಹಿ ಮೂರ್ತಿ (Eco-Friendly Ganesha) ತಯಾರಿಸಲು ಯಾರ ಅವಲಂಬನೆಯೂ ಅಗತ್ಯವಿಲ್ಲ. ಕುಟುಂಬದ ಸದಸ್ಯರ ಸಹಾಯದಿಂದ ಗಣೇಶನ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಬಹುದು. ಪರಿಸರ ಸ್ನೇಹಿ ವಿಗ್ರಹಗಳನ್ನು ಸಿದ್ಧಪಡಿಸುವುದು ಸುಲಭ. ಕುಟುಂಬದಲ್ಲಿ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಪರಿಸರ ಸ್ನೇಹಿ ಮೂರ್ತಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಯು ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಗುರುತಿಸುವುದು ಹೇಗೆ?:
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಮೂರ್ತಿಗಳು ತೂಕದಲ್ಲಿ ಹಗುರವಾಗಿರುತ್ತವೆ. ವಿಷಕಾರಿ ಮತ್ತು ಹೊಳೆಯುವ ಬಣ್ಣಗಳಿಂದ ಚಿತ್ರಿಸಲಾಗಿರುತ್ತದೆ. ಆದರೆ, ಪರಿಸರ ಸ್ನೇಹಿ ವಿಗ್ರಹಗಳು ತೂಕದಲ್ಲಿ ಹೆಚ್ಚು ಭಾರವಾಗಿರುತ್ತದೆ. ಬಣ್ಣರಹಿತವಾಗಿರುತ್ತವೆ ಮೂರ್ತಿಗಳು.
ಪರಿಸರ ಸ್ನೇಹಿ ಗಣಪನ ಮೂರ್ತಿ ಬಳಸಿ:
ಸರ್ಕಾರ, ಇಲಾಖೆಗಳು, ಸಂಘ ಸಂಸ್ಥೆಗಳು ಎಷ್ಟೇ ಮನವಿ ಮಾಡಿಕೊಂಡು ಬಂದರೂ ನಾವು ಪರಿಸರ ಸ್ನೇಹಿ ಗಣಪನನ್ನು ಅಷ್ಟಾಗಿ ಪೂಜಿಸುತ್ತಿಲ್ಲ. ನಮ್ಮ ಮತ್ತು ಮುಂದಿನ ಜನಾಂಗದ ಉಳಿವಿಗೆ ಪರಿಸರ ಸ್ನೇಹಿ ಗಣಪನನ್ನು ತಂದು ಪೂಜಿಸುವುದು, ವಿಸರ್ಜಿಸುವುದು ಸೂಕ್ತ.
ಗೌರಿ-ಗಣೇಶ ಹಬ್ಬ ಮತ್ತೆ ಬಂದಿದೆ. ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮಾದರಿಯ ಗಣೇಶನನ್ನು ಕೂರಿಸುವುದರಿಂದ ದೂರ ಇರಬೇಕಿದೆ. ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ, ಪರಿಸರ ಸ್ನೇಹಿಯಾಗಿಯೇ ಹಬ್ಬ ಆಚರಿಸಬೇಕಿದೆ. ಆ ಮೂಲಕ ಪರಿಸರ, ಜಲ ಮಾಲಿನ್ಯ ತಡೆಗಟ್ಟುವ ಅಗತ್ಯವಿದೆ.