ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭ ಪ್ರಾರಂಭಿಸುವ ಮೊದಲು ಯಾವುದೇ ಅಡಚಣೆ ಅಥವಾ ತೊಂದರೆ ಆಗದಂತೆ ವಿಘ್ನನಿವಾರಕ ಗಣಪತಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣೇಶನಿಗೆ ಹಲವು ನಾಮ. ಗಜಾನನ, ಗಣಪತಿ, ವಕ್ರತುಂಡ, ವಿನಾಯಕ, ಏಕದಂತ, ಗಣೇಶ ಹೀಗೆ ಹತ್ತು ಹಲವು ಹೆಸರುಗಳಿಂದ ಗಣಪತಿಯನ್ನು ಆರಾಧಿಸಲಾಗುತ್ತದೆ. ಅವುಗಳಲ್ಲಿ ಏಕದಂತ ಎನ್ನುವ ಹೆಸರೂ ಒಂದು. ಗಣೇಶನ ಒಂದು ದಂತ ಮುರಿದಿರುವ ಕಾರಣ ಆತನನ್ನು ಏಕದಂತ ಎಂದು ಕರೆಯಲಾಗುತ್ತದೆ. ಗಣೇಶ ಏಕದಂತನಾಗಲು ಕಾರಣವೇನು? ಪುರಾಣದ ಕಥೆ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಪರಶುರಾಮ ಮತ್ತು ಗಣೇಶನ ನಡುವೆ ಯುದ್ಧ:
ಒಮ್ಮೆ ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ್ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು. ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ. ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವನ್ನು ನಾನು ಶೀಘ್ರವಾಗಿ ಭೇಟಿ ಆಗಲೇಬೇಕು ಎಂದು ಪರಶುರಾಮರು ಗಣೇಶನಿಗೆ ತಿಳಿಸಿದರು. ಆದರೆ ಗಣೇಶ ಅವರನ್ನು ಒಳಗೆ ಬಿಡುವುದಿಲ್ಲ.
ಇದರಿಂದ ಕೋಪಗೊಂಡ ಪರಶುರಾಮರು ನನ್ನನ್ನು ಒಳಗೆ ಬಿಡದಿದ್ದರೆ ನನ್ನೊಂದಿಗೆ ಯುದ್ಧ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ನಾನು ಗೆದ್ದರೆ ಶಿವನನ್ನು ಭೇಟಿಯಾಗಲು ನನ್ನನ್ನು ಒಳಗೆ ಬಿಡಬೇಕು ಎಂದು ಪರಶುರಾಮರು ಗಣೇಶನಿಗೆ ಸವಾಲೆಸೆದರು. ಗಣೇಶನು ಯುದ್ಧದ ಸವಾಲನ್ನು ಸ್ವೀಕರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದ ಸಮಯದಲ್ಲಿ, ಪರಶುರಾಮರು ತಮ್ಮ ಕೊಡಲಿಯಿಂದ ಗಣೇಶನ ಮೇಲೆ ದಾಳಿ ಮಾಡಿದರು. ಇದನ್ನು ಎದುರಿಸಲು ಗಣೇಶ ತನ್ನ ಎಡಗಡೆಯ ದಂತವನ್ನು ಬಳಸಿದರು. ಇದರ ಪರಿಣಾಮವಾಗಿ ಗಣೇಶನ ದಂತ ಮುರಿಯುತ್ತದೆ. ಗಣೇಶನ ಒಂದು ಹಲ್ಲು ಮುರಿದ ಕಾರಣ ಆತನನ್ನು ಏಕದಂತ ಎಂದು ಕರೆಯುತ್ತಾರೆ.
ಗಣೇಶನಷ್ಟೇ ಪರಶುರಾಮರು ಯುದ್ಧದಲ್ಲಿ ನಿಪುಣರಾಗಿರದ್ದರು. ಇವರಿಬ್ಬರ ನಡುವಿನ ಯುದ್ಧ ಎನ್ನುವಂತಹದ್ದು ಭಯಾನಕವಾಗಿದ್ದು, ಈ ಯುದ್ಧದಲ್ಲಿ ಗಣೇಶನು ತನ್ನ ಒಂದು ದಂತವನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ಗಣೇಶನು ಒಂದೇ ದಂತವನ್ನು ಹೊಂದಿದ್ದು, ಏಕದಂತ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತಾನೆ.
ಮಹಾಭಾರತದ ಕಥೆ:
ಮತ್ತೊಂದು ಕಥೆಯ ಪ್ರಕಾರ, ಮಹಾಭಾರತವನ್ನು ಗಣೇಶ ಮಹಾಭಾರತವನ್ನ ಬರೆಯುವ ಸಮಯದಲ್ಲಿ, ಮಹರ್ಷಿ ವೇದವ್ಯಾಸರು ಗಣೇಶ ನಾನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗಬೇಕು ಅರ್ಧಕ್ಕೆ ನಿಲ್ಲಿಸುವಂತಿಲ್ಲ ಎಂದು ತಾಕೀತು ಮಾಡಿರುತ್ತಾರೆ. ಇದಕ್ಕೆ ಒಪ್ಪಿ ಗಣೇಶ ಬರೆಯುತ್ತಿರುತ್ತಾನೆ. ಆದರೆ ಬರೆಯುವಾಗ ಯಾವುದೋ ಸಮಸ್ಯೆ ಎದುರಾಗುತ್ತದೆ. ತಕ್ಷಣ ಗಣೇಶ ತನ್ನ ದಂತವನ್ನು ಮುರಿದು ಅದರಲ್ಲಿ ಬರೆಯಲು ಆರಂಭಿಸಿದ ಎನ್ನುವ ನಂಬಿಕೆ ಇದೆ.