ರಾಯಚೂರು: ಜಿಲ್ಲೆಯ ನಗರ ರೈಲ್ವೇ ನಿಲ್ದಾಣ ಅಂದ್ರೆ ಈ ಹಿಂದೆ ಮೂಗು ಮುರಿಯುವಂತಿತ್ತು. ಆದರೆ ಈಗ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಿಂದಾಗಿ ಇಡೀ ರೈಲ್ವೇ ನಿಲ್ದಾಣದಲ್ಲಿ ಹೊಸ ಲೋಕವೇ ಸೃಷ್ಟಿಯಾದಂತಾಗಿದೆ.
ಈ ಹಿಂದೆ ಸ್ವಚ್ಛ ಭಾರತ ಅಭಿಯಾನದ ಸರ್ವೆಯಲ್ಲಿ ಕೆಳಗಡೆಯಿಂದ ನಾಲ್ಕನೇ ಸ್ಥಾನ ಪಡೆದು ಅಪಕೀರ್ತಿಗೆ ಒಳಗಾಗಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸೂಚನೆಯಂತೆ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ರಾಯಚೂರು ನಿಲ್ದಾಣ ದೇಶದ ನೂರು ಸ್ವಚ್ಛ ನಿಲ್ದಾಣಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಿದೆ.
ಸ್ವಚ್ಛ ರೈಲು ಅಭಿಯಾನದಲ್ಲೂ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ, ಸ್ವಚ್ಛ ರೈಲು ಶೀರ್ಷಿಕೆಯಡಿ ಇಡೀ ರೈಲ್ವೇ ನಿಲ್ದಾಣ ಈಗ ಗಾಂಧೀಮಯವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ನೆನಪನ್ನ ಮರುಕಳಿಸುವಂತೆ ಸುಂದರವಾದ ಚಿತ್ರಗಳನ್ನ ಇಡೀ ರೈಲ್ವೇ ನಿಲ್ದಾಣದ ತುಂಬಾ ಬಿಡಿಸಲಾಗಿದೆ. ಗಾಂಧಿಜೀ ಅವರ 150ನೇ ಜಯಂತಿ ಹಿನ್ನೆಲೆ ರಾಯಚೂರು ನಿಲ್ದಾಣ ಈಗ ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ ಎಂದು ರೈಲ್ವೇ ಸಲಹಾ ಸಮಿತಿ ಮಾಜಿ ಸದಸ್ಯ ಜಗದೀಶ್ ಗುಪ್ತಾ ಹೇಳಿದ್ದಾರೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಕಲಾವಿದರು ಗಾಂಧೀಜಿ ರಾಯಚೂರಿಗೆ ಬಂದಿದ್ದ ಕ್ಷಣಗಳಿಗೆ ಮರುಜೀವ ನೀಡಿದ್ದಾರೆ. ಉಪ್ಪಿನ ಸತ್ಯಾಗ್ರಹ ಸೇರಿ ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳನ್ನ ಸುಂದರವಾಗಿ ಚಿತ್ರಿಸಲಾಗಿದೆ. ಅಲ್ಲದೆ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ. ಗಾಂಧೀಜಿ ಅವರ 150ನೇ ಜನ್ಮದಿನದ ನೆನಪಿಗಾಗಿ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಬಾಪೂಜಿ ಪುತ್ಥಳಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ದೇಶದ 10 ಸ್ವಚ್ಛ ರೈಲ್ವೇ ನಿಲ್ದಾಣಗಳನ್ನ ಆಯ್ಕೆ ಮಾಡಿ ವಿಶೇಷ ಕಲಾಚಿತ್ರಗಳಿಂದ ಸುಂದರಗೊಳಿಲಾಗಿದೆ. ಜಾನಪದ ಚಿತ್ರಗಳಿಗೆ ಸಿಖಂದರಬಾದ್ ರೈಲ್ವೇ ನಿಲ್ದಾಣವನ್ನ ಆಯ್ಕೆ ಮಾಡಿದ್ರೆ, ಸ್ವಚ್ಛ ಭಾರತ ಹಾಗೂ ಸ್ವಚ್ಛ ರೈಲು ಶೀರ್ಷಿಕೆಗೆ ರಾಯಚೂರು ರೈಲ್ವೇ ನಿಲ್ದಾಣ ಆಯ್ಕೆ ಮಾಡಲಾಗಿದೆ. ಈಗ ರಾಯಚೂರು ರೈಲ್ವೇ ನಿಲ್ದಾಣ ದಕ್ಷಿಣ ಮಧ್ಯ ರೈಲ್ವೇ ನಿಲ್ದಾಣಗಳಲ್ಲೇ ಸುಂದರ ನಿಲ್ದಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv