ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಜಿಲ್ಲೆಯ ಕಲಾವಿದರೊಬ್ಬರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮೈಸೂರಿನ ಕಲಾವಿದರಾದ ಕುಂಬಾರಗೇರಿಯ ರೇವಣ್ಣ ಹಲವು ಅವರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಹೊಸ ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿಂಗ್ ಕಮಾಂಡರ್ ಅಭಿನಂದನ್, ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರೊಂದಿಗೆ ಗಣಪತಿ ನಿಂತಿರುವ ಮೂರ್ತಿಗಳನ್ನು ಕಲಾವಿದರು ಮಾಡಿದ್ದಾರೆ. ಮತ್ತೊಂದು ವಿನ್ಯಾಸದಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ನಾಯಕರು ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ಮೂರ್ತಿಗಳ ಜೊತೆ ಗಣಪ ನಿಂತಿರುವುದನ್ನು ಕೂಡ ಮಾಡಿದ್ದಾರೆ.
Advertisement
Advertisement
ಇದಲ್ಲದೇ, ಸಿಎಂ ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಜೊತೆಯೂ ಗಣಪ ನಿಂತಿರುವ ಪೂರ್ತಿಗಳು ಇವೆ. ಜೊತೆಗೆ ಶಿವನ ಹಸ್ತದ ಒಳಗೆ ಮೋದಿ ಧ್ಯಾನ ಸ್ಥಿತಿಯಲ್ಲಿ ಕೂತಿರುವಂತೆ ಒಂದು ಮೂರ್ತಿಯನ್ನು ಮಾಡಲಾಗಿದೆ. ಈ ವೈಶಿಷ್ಟ್ಯಪೂರ್ಣ ವಿನ್ಯಾಸಗಳು ಈಗ ಜನರ ಗಮನ ಸೆಳೆಯುತ್ತಿವೆ.
Advertisement
ಈ ಬಗ್ಗೆ ಮಾತನಾಡಿದ ಕಲಾವಿದ ರೇವಣ್ಣ ಅವರು, ನಾನು ಸುಮಾರು 35 ವರ್ಷದಿಂದ ಮೈಸೂರಿನಲ್ಲಿ ಗೌರಿ, ಗಣಪತಿಯನ್ನು ತಯಾರಿ ಮಾಡಿಕೊಂಡು ಬಂದಿದ್ದೇನೆ. ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣಪನನ್ನು ನಾನು ತಯಾರಿಸುತ್ತಾ ಬಂದಿದ್ದೇನೆ. ಕಳೆದ 20 ವರ್ಷದಿಂದ ನನ್ನದೇ ಪರಿಕಲ್ಪನೆಯಲ್ಲಿ ವಿಶೇಷ ವಿನ್ಯಾಸದ ಗಣಪತಿಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ ಎಂದರು.
Advertisement
ನಾನು ಈ ಬಾರಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವನ್ನು ಮನದಲ್ಲಿ ಇಟ್ಟುಕೊಂಡು ಗಣಪತಿಗಳನ್ನು ತಯಾರಿಸಿದ್ದೇನೆ ಎಂದು ಹೇಳಿದರು. ಜೊತೆಗೆ ತಮ್ಮ ದೇಶಕ್ಕೆ ಕೀರ್ತಿ ತಂದ ಹೆಮ್ಮೆಯ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಆಟಗಾರ್ತಿ ಪಿ.ವಿ ಸಿಂಧು ಅವರ ಮೂರ್ತಿಯೊಂದಿಗೆ ಕೂಡ ಗಣಪ ಇರುವ ಮೂರ್ತಿಯನ್ನು ರೇವಣ್ಣ ತಯಾರಿಸಿದ್ದಾರೆ.