ಬೆಂಗಳೂರು: ಸ್ನೇಹಿತರೆಲ್ಲರೂ ಕುಳಿತು ಮೊಬೈಲಿನಲ್ಲಿ ಗೇಮ್ ಆಡುತ್ತಿದ್ದಾಗ ಜಗಳ ಶುರುವಾಗಿದ್ದು, ಕೊನೆಗೆ ಗೆಳೆಯನನ್ನೇ ಕೊಲೆ ಮಾಡುವ ಮೂಲಕ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ.
ಷೇಕ್ ಮಿಲನ್(32) ಕೊಲೆಯಾದವ. ಈತ ಕುಮಾರಸ್ವಾಮಿ ಲೇಔಟ್‍ನ ಇಲಿಯಾಸ್‍ನಗರದಲ್ಲಿ ಪತ್ನಿ ಜೊತೆ ವಾಸವಾಗಿದ್ದನು. ಖಾಸಗಿ ಫುಡ್ ಆಪ್‍ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದನು. ಈತ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಹೊರಗೆ ಬಂದು ಒಂದು ಜಾಗದಲ್ಲಿ ಕುಳಿತಿದ್ದನು.
Advertisement
Advertisement
ಮಿಲನ್ ದಿನನಿತ್ಯ ಬಂದು ಸ್ನೇಹಿತರೊಟ್ಟಿಗೆ ಕೂರೋ ಜಾಗ ಇದಾಗಿದ್ದು, ಶುಕ್ರವಾರ ಕೂಡ ಮಿಲನ್ ತನ್ನ ಸ್ನೇಹಿತರಾದ ಷಾಯಿಬ್, ಸಾದತ್, ನಯಾಜ್, ಅಸು ಮುಂತಾದವರು ಇಲ್ಲೇ ಕುಳಿತು ಮೊಬೈಲ್‍ನಲ್ಲಿ ಲೂಡೋ ಗೇಮ್ ಆಡುತ್ತಿದ್ದರು.
Advertisement
ಹಾವು ಏಣಿ ಆಟವನ್ನೇ ಹೋಲುವ ಲೂಡೋ ಗೇಮ್ ಆಡುತ್ತಿದ್ದರು. ಸೋಲು ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟಿದ್ದ ಇವರ ನಡುವೆ ಜಗಳ ಶುರುವಾಗಿದೆ. ಆಟ ಮಧ್ಯೆಯೇ ಮಿಲನ್, ಷಾಯಿಬ್ ಅನ್ನೋನಿಗೆ ಹೊಡೆದಿದ್ದನು. ಈ ವೇಳೆ ಜೇಬಿನಲ್ಲಿದ್ದ ಹರಿತವಾದ ಚಾಕುವನ್ನ ತೆಗೆದು ಷಾಯಿಬ್, ಮಿಲನ್ ತಲೆಗೆ ಇರಿದಿದ್ದನು. ಪರಿಣಾಮ, ಕಿವಿಯ ಹಿಂಭಾಗದಿಂದ ತಲೆಯ ಮಧ್ಯದವರೆಗೂ ಚರ್ಮ ಸೀಳಿ ಹೋಗಿತ್ತು. ಇದರಿಂದ ಬೆಚ್ಚಿಬಿದ್ದ ಎಲ್ಲರು ಅಲ್ಲಿಂದ ಪರಾರಿಯಾಗಿದ್ದಾರೆ.
Advertisement
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕೆ.ಎಸ್ ಲೇಔಟ್ ಪೊಲೀಸರು ಕೂಡಲೇ ಷೇಕ್ ಮಿಲನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೇ ಆತ ಪ್ರಾಣಬಿಟ್ಟಿದ್ದನು. ಅದಹಾಗೆ ಕುಮಾರಸ್ವಾಮಿ ಲೇಔಟ್, ಇಲಿಯಾಸ್ ನಗರ ಹಾಗೂ ಸುತ್ತ-ಮುತ್ತ ಗಾಂಜಾ ಸೇದುವ ಹುಡುಗರ ಸಂಖ್ಯೆ ಜಾಸ್ತಿಯಿದ್ದು, ಈ ಕೊಲೆ ಪ್ರಕರಣದ ಆರೋಪಿ ಷಾಯಿಬ್ ಕೂಡ ಗಾಂಜಾ ವ್ಯಸನಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.