ಬಳ್ಳಾರಿ/ಬೆಂಗಳೂರು: ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ ಎದುರಾಗಿದೆ. ಮೈನಿಂಗ್ ಕೇಸ್‌ನಲ್ಲಿ ರೆಡ್ಡಿ ದೋಷಿ ಎಂದು ತೀರ್ಪು ನೀಡಿರುವ ಕೋರ್ಟ್, 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗ ರೆಡ್ಡಿಗೆ ಶಾಸಕ ಸ್ಥಾನದಿಂದ ಅನರ್ಹವಾಗುವ ಭೀತಿ ಎದುರಾಗಿದೆ.
ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಗೆದ್ದಿದ್ದ ಜನಾರ್ದನ ರೆಡ್ಡಿ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ 2 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾದರೆ ಅನರ್ಹ ಸಾಧ್ಯತೆಯಿದೆ. 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲುವಂತಿಲ್ಲ. ಅಲ್ಲದೇ, ಸದ್ಯದ ಶಾಸಕ ಸ್ಥಾನ ಸಹ ಅನರ್ಹವಾಗಬಹುದು. ಇದೆಲ್ಲವೂ ಸಿಬಿಐ ಕೋರ್ಟ್ನ ಆದೇಶ ಜಾರಿಯಾದರೆ ಮಾತ್ರ ಸಾಧ್ಯ. ಹೈಕೋರ್ಟ್ನಿಂದ ಸ್ಟೇ ತಂದರೆ ಯಾವುದೇ ತೊಂದರೆಯಿಲ್ಲ.
1951 ರ ಪ್ರಜಾಪ್ರತಿನಿಧಿ ಕಲಂ 8(3) ಅಡಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹರಾಗ್ತಾರೆ. ಅಲ್ಲದೇ, ಮುಂದಿನ 6 ವರ್ಷಗಳ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 3 ತಿಂಗಳ ಒಳಗೆ ಕೋರ್ಟ್ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದೆ. ಅಲ್ಲಿ ಅರ್ಜಿ ಪುರಸ್ಕರಿಸಿದರೆ ಶಾಸಕ ಸ್ಥಾನ ಅನರ್ಹತ್ವಕ್ಕೆ ತಡೆ ಬೀಳಲಿದೆ.