ಬೆಂಗಳೂರು: ಚಾಮರಾಜನಗರ (Chamarajanagara) ಜಿಲ್ಲೆ ಬೂದಿಪಡಗ ಆನೆ ಶಿಬಿರದಲ್ಲಿ ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದಂತೆ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ (Mathigodu Elephant Camp) ಸ್ಥಳಾಂತರಿಸಲಾಗಿದೆ.
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗಿಯಾಗಿ ರಾಜ್ಯದ ಹೆಮ್ಮೆಯ ಪ್ರತೀಕವಾಗಿದ್ದ ಗಜೇಂದ್ರ ಚಾಮರಾಜನಗರ ಬೂದಿಪಡಗ ಶಿಬಿರದಲ್ಲಿ ಇತ್ತೀಚೆಗೆ ಒಂಟಿಯಾಗಿ ಹೋಗಿದ್ದ. ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಯಾಗಿದ್ದು, ಒಂಟಿತನದಿಂದ ಕೃಶವಾಗಿದ್ದಾನೆ. ಕಾಡಿಗೆ ಮೇಯಲು ಬಿಟ್ಟರೆ, ಕಾಡಾನೆಗಳೊಂದಿಗೆ ಕಾದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದಾನೆ. ಹೀಗಾಗಿ, ಸುರಕ್ಷಿತ ಆನೆ ಶಿಬಿರಕ್ಕೆ ಗಜೇಂದ್ರನನ್ನು ಸ್ಥಳಾಂತರಿಸಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನವೂ ನಡೆಯುತ್ತಿತ್ತು. ಇದನ್ನೂ ಓದಿ: ಹೆಚ್ಚಾದ ಬಿಸಿಲು – ಉ.ಕರ್ನಾಟಕದ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯದ ಬದಲಾವಣೆ
ಹಲವರು ಸಚಿವ ಈಶ್ವರ ಖಂಡ್ರೆಗೆ ಮನವಿ ಮಾಡಿದ್ದರು. ಜನರ ಭಾವನೆಗಳಿಗೆ ಮತ್ತು ಮನವಿಗೆ ಸ್ಪಂದಿಸಿದ ಅರಣ್ಯ ಸಚಿವರು, ಕೂಡಲೇ ನಿಯಮಾನುಸಾರ ಕ್ರಮ ವಹಿಸುವಂತೆ ಲಿಖಿತ ಆದೇಶ ನೀಡಿದ್ದರು. ಇಂದು ಮಧ್ಯಾಹ್ನ ಬೂದಿ ಪಡಗದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿ, ಇಲಾಖೆಯ ಆನೆ ರಕ್ಷಣೆ ವಾಹನದಲ್ಲಿ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಲಾಯಿತು.

