ಮೈಸೂರು: ದಸರಾ ವೇಳೆ ಯಶಸ್ವಿಯಾಗಿ ಜಂಬೂ ಸವಾರಿ ಮುಗಿಸಿದ ಗಜ ಪಡೆಗಳು ಫುಲ್ ರೆಸ್ಟ್ ನಲ್ಲಿ ಇವೆ. ಮಾವುತರು, ಕಾವಾಡಿಗಳು ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಗಜಪಡೆ ನಾಯಕ ಅರ್ಜುನ, ಬಲರಾಮ ಸಹಿತ ಎಲ್ಲಾ ಆನೆಗಳು ವಿಶ್ರಾಂತಿ ಪಡೆಯುತ್ತಿದ್ದು, ಆನೆಗಳಿಗೆ ಮಾವುತರು ಸ್ನಾನ ಮಾಡಿಸಿ, ಗಜಪಡೆಗಳ ಜೊತೆ ಮಾವುತರು, ಕಾವಾಡಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಆನೆಗಳು ಗುರುವಾರ ಅಥವಾ ಶುಕ್ರವಾರ ಮತ್ತೆ ಅರಮನೆಯಿಂದ ಕಾಡಿಗೆ ತೆರಳಲಿದೆ. ಇದನ್ನೂ ಓದಿ:ಜಂಬೂಸವಾರಿ ವೇಳೆ ವಾಲಿದ ಅಂಬಾರಿ- ಕೈಸನ್ನೆ ಮಾಡಿದ ಪ್ರಮೋದಾದೇವಿ
ಮಂಗಳವಾರ ನಡೆದ ಅದ್ಧೂರಿ ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು ಹೊತ್ತುಕೊಂಡು ನಾಯಕ ಅರ್ಜುನ ಗಜಪಡೆ ಜೊತೆ ಹೆಜ್ಜೆ ಹಾಕಿ ದಸರಾವನ್ನು ಯಶಸ್ವಿಯಾಗಿದ್ದಾನೆ. ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.09ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4.17ರ ಶುಭ ಕುಂಬ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. ಇದನ್ನೂ ಓದಿ:ಅರ್ಜುನನಿಗೆ ಇನ್ನೂ 10 ವರ್ಷ ಅಂಬಾರಿ ಹೊರುವ ತಾಕತ್ತಿದೆ- ಮಾವುತ ವಿನು
ಜಂಬೂ ಸವಾರಿಯಲ್ಲಿ 8ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ಸಾಗಿದ್ದನು. ಈ ಜಂಬೂಸವಾರಿಯಲ್ಲಿ 39 ಸ್ತಬ್ಧ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ, 1,675 ಕಲಾವಿದರು ಸೇರಿದಂತೆ ಒಟ್ಟು 2 ಸಾವಿರ ಮಂದಿ ಭಾಗಿಯಾಗಿದ್ದವು.
ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿ, ಇತ್ತ ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಂಜನ್ನು ಹಿಡಿದು ಸಾಹಸ ಪ್ರದರ್ಶಿಸಿದರು. ಈ ಪಂಜಿನ ಕವಾಯತಿನ ಬಳಿಕ ರಾತ್ರಿ 10 ಗಂಟೆಗೆ ಪಟಾಕಿ ಸಿಡಿಸೋ ಮೂಲಕ ದಸರಾ ಯಶಸ್ವಿ ತೆರೆಕಂಡಿದೆ.
https://www.youtube.com/watch?v=xz6CgKrcUOs