ಬೆಂಗಳೂರು: ಮಾನವಸಹಿತ ಗಗನಯಾನ (Gaganyaan Mission) ಸಿದ್ಧತೆಯ ಭಾಗವಾಗಿ, ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಮಾನವ ರಹಿತ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ವಾಹನ ಯಶಸ್ವಿಯಾಗಿ ಉಡಾವಣೆಯಾಗಿದೆ.
3 ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಪ್ರಯತ್ನಿಸಿದ ಇಸ್ರೋ, ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ TV-D1 ರಾಕೆಟ್ ಉಡಾವಣೆ ಮಾಡಲಾಯಿತು. ಯಶಸ್ವಿಯಾಗಿ ಹಾರಾಟ ನಡೆಸಿದ, ರಾಕೆಟ್ ಸೇಫ್ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಇಂದು ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಟಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು.
ಈ ಪರೀಕ್ಷೆಗೆ TV-D1 ಎಂದು ಹೆಸರಿಸಲಾಗಿದೆ. ಇಂತಹ ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕ ಹಂತದ ರಾಕೆಟ್ ʻಟಿವಿ-ಡಿ1ʼ ನಭಕ್ಕೆ ಚಿಮ್ಮಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.
TV-D1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್‌ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
TV-D ವಾಹನವು ಮಾರ್ಪಡಿಸಿದ ವಿಕಾಸ್ (VIKAS) ಎಂಜಿನ್ ಒಳಗೊಂಡಿದ್ದು, ಕ್ರ‍್ಯೂ ಮಾಡ್ಯೂಲ್ ಮತ್ತು ಕ್ರ‍್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.9 ಮೀಟರ್ ಎತ್ತರದಲ್ಲಿದೆ ಮತ್ತು 44 ಟನ್‌ಗಳಷ್ಟು ತೂಕ ಹೊಂದಿದೆ. ಒಂದು ವೇಳೆ ಈ ಮಿಷನ್ ಯಶಸ್ವಿಯಾದಲ್ಲಿ ಮಾನವಸಹಿತ ಬ್ಯಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.
Web Stories