ಚಾಮರಾಜನಗರ: ನಿಜಕ್ಕೂ ಇದೊಂದು ದೃಶ್ಯ ವೈಭವವೇ ಸರಿ. ಒಂದೆಡೆ ಪ್ರಕೃತಿಯ ಸೊಬಗು, ಮತ್ತೊಂದೆಡೆ ಕಾವೇರಿಯ ನೃತ್ಯ ವೈಯ್ಯಾರ. ಇದು ಜಗತ್ತಿನಲ್ಲಿಯೇ ಅಪರೂಪದ ಭೂ ಸೃಷ್ಠಿಯ ಅಚ್ಚರಿಯಾಗಿದೆ. ಚಾಮರಾಜನಗರ ಜಿಲ್ಲೆ ಭರಚುಕ್ಕಿ ಹಾಗು ಗಗನಚುಕ್ಕಿ ಜಲಪಾತಗಳಲ್ಲಿ ಕಾವೇರಿಯ ಆರ್ಭಟ, ಭೂಮಿಯನ್ನು ಸೀಳಿ ಧುಮ್ಮಿಕ್ಕುವ ಐಸಿರಿ ನಿಜಕ್ಕೂ ವರ್ಣಾತೀತವಾಗಿದೆ.
ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇಲ್ಲಿ ಒಂದಲ್ಲ ಎರಡಲ್ಲ, ಲೆಕ್ಕವಿಲ್ಲದಷ್ಟು ಜಲಪಾತಗಳು ನಯನ ಮನೋಹರವಾಗಿ ಹರಿದಾಡುತ್ತವೆ. ಒಂದೆಡೆ ವಿಶಾಲವಾಗಿ ಕವಲು ಕವಲಾಗಿ ಶರವೇಗದಲ್ಲಿ ಬಿರುಸು ಬಿರುಸಾಗಿ ರಭಸದಿಂದ ಧುಮ್ಮಿಕ್ಕುವ ಭರಚುಕ್ಕಿ, ಮತ್ತೊಂದೆಡೆ ಗಗನದಿಂದ ಧುಮ್ಮಿಕ್ಕು ಹರಿಯುತ್ತಿರುವ ಗಗನಚುಕ್ಕಿ.
Advertisement
Advertisement
ಕಾವೇರಿ ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗನ್ನು ನೋಡಿಯೇ ಅನುಭವಿಸಬೇಕು. ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯದ್ಭುತವಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ಐಸಿರಿ ನಯನಮನೋಹರವಾಗಿದ್ದು, ಭರಚುಕ್ಕಿಯಷ್ಟೇ ಆಕರ್ಷಕವಾಗಿದೆ ಗಗನಚುಕ್ಕಿ. ಭರಚುಕ್ಕಿಯದ್ದು ಅಗಲವಾದ ನೋಟವಾದರೆ ಗಗನಚುಕ್ಕಿಯದ್ದು ಆಳದ ನೋಟ. ಅಕ್ಕಪಕ್ಕದಲ್ಲೇ ಇರುವ ಈ ಜೋಡಿ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ದೃಶ್ಯ ವೈಭವಕ್ಕೆ ಮನಸೋಲದ ಪ್ರವಾಸಿಗರೇ ಇಲ್ಲ.
Advertisement
ಭರಚುಕ್ಕಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಅಗಲವಾಗಿ ಮೈದಳೆದಿರುವ ಕಾವೇರಿ ಸುಮಾರು 75 ರಿಂದ 100 ಅಡಿವರೆಗೆ ಧುಮ್ಮಿಕ್ಕುವ ದೃಶ್ಯವಂತು ನಯನ ಮನೋಹರವಾಗಿದೆ. ನಭೋ ಲೋಕ ಮುಟ್ಟಿದಂತೆ ಭಾಸವಾಗುವ ಭೋರ್ಗರೆತ, ಸುತ್ತಲೂ ಇರುವ ಬೆಟ್ಟಸಾಲು, ಹಸಿರಿನಿಂದ ಕಂಗೊಳಿಸುವ ಅರಣ್ಯ, ಭರಚುಕ್ಕಿ ಜಲಪಾತದ ಸೊಬಗನ್ನು ಮತ್ತಷ್ಟು ಸುಂದರವಾಗಿಸಿದೆ. ಇಲ್ಲಿ ಅಗಲವಾಗಿ ಧುಮ್ಮಿಕ್ಕುವ ಹಾಲ್ನೊರೆಯಂತಹ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಪರಮಾನಂದ. ಇನ್ನು ಗಗನಚುಕ್ಕಿಯಲ್ಲಿ ಗಗನದಿಂದ ಧುಮ್ಮಿಕ್ಕುವವಳಂತೆ ಗೋಚರಿಸುವ ಕಾವೇರಿಯ ನೋಟ ವರ್ಣಿಸಲಸದಳ. ಸುಮಾರು ನೂರು ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಭಸ ಹಾಗು ಭೋರ್ಗರೆತ ಎಂತಹವರರನ್ನು ಬೆರಗೊಳಿಸುತ್ತದೆ ಎಂದು ಪ್ರವಾಸಿಗರು ಹೇಳಿದ್ದಾರೆ.
Advertisement
ಶಿವನ ಸಮುದ್ರದ ಟಿಪ್ಪು ಸೇತುವೆಯಿಂದ ಹಿಡಿದು ಭರಚುಕ್ಕಿ ಗಗನಚುಕ್ಕಿ ಜಲಪಾತದವರೆಗೂ ಎತ್ತ ನೋಡಿದರೂ ಕಾವೇರಿಯ ಸೊಬಗೇ ಮೈದುಂಬಿಕೊಂಡಿದೆ. ಜಲಪಾತದ ಸಮೂಹವನ್ನು ಒಳಗೊಂಡಿರುವ ಈ ಪ್ರದೇಶ ನಿಜಕ್ಕು ಭೂ ಸೃಷ್ಠಿಯ ಅಚ್ಚರಿಯಾಗಿದೆ. ಕಾವೇರಿಯ ಸಂಭ್ರಮಕ್ಕೆ ಇಲ್ಲಿ ಎಣ್ಣೆಯೇ ಇಲ್ಲ. ವಾರಾಂತ್ಯದ ದಿನಗಳಲ್ಲಂತು ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹಾಲ್ನೊರೆಯಂತಹ ಜಲಧಾರೆಯನ್ನು ಕಣ್ಣಿನಿಂದಲೇ ಆಸ್ವಾಧಿಸುವ, ಕಾವೇರಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಂಡು ಹೋಗುವ ಪ್ರವಾಸಿಗರ ಆನಂದಕ್ಕೆ ಇಲ್ಲಿ ಮಿತಿಯೇ ಇಲ್ಲ.