ಗದಗ: ಕರ್ತವ್ಯ ನಿರತರಾಗಿದ್ದ ವೇಳೆ ಗಾಯಗೊಂಡಿದ್ದ ಗದಗದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕುಮಾರಸ್ವಾಮಿ ಡಿ ನಾಗರಾಳ (36) ನಿಧನರಾದ ಯೋಧ. ಕುಮಾರಸ್ವಾಮಿ ಅವರ ಪಾರ್ಥಿವ ಶರೀರ ಜಿಲ್ಲೆಯ ವಿವೇಕಾನಂದ ನಗರದಲ್ಲಿ ಇರುವ ಅವರ ಮನೆಗೆ ಆಗಮಿಸಿದೆ. ಯೋಧರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಯೋಧ ಕುಮಾರಸ್ವಾಮಿ ಅವರು ಕಳೆದ 16 ವರ್ಷಗಳಿಂದ ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೋಲ್ಕತ್ತಾದಲ್ಲಿ ಹೆಡ್ ಕಾನ್ಸ್‍ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೋಲ್ಕತ್ತಾ “27 ಬಟಾಲಿಯನ್ ಟಾಗೋರ್ ಬಿಲ್ಲಾ” ದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಯೋಧ ಕುಮಾರಸ್ವಾಮಿ ಅವರಿಗೆ ಸೋಮವಾರ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೋಲ್ಕತ್ತಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 19ರಂದು ನಿಧನರಾಗಿದ್ದಾರೆ.
ಕುಮಾರಸ್ವಾಮಿ ಅವರ ಪಾರ್ಥಿವ ಶರೀರ ಇಂದು ತಾಯ್ನಾಡಿಗೆ ಆಗಮಿಸಿದೆ. ಜಿಲ್ಲಾಡಳಿತದಿಂದ ನಗರದ ಸಾಯಿಮಂದಿರ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.