ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದ ರೈತ ದೇವನಗೌಡ ಪಾಟೀಲ್ ಹೆಸರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ರೈತ ದೇವನಗೌಡ್ರು ಜಮೀನನ್ನು ಶ್ರೀನಿವಾಸ ಬಾಕಳೆ ಎಂಬುವರಿಗೆ 22 ಫೆಬ್ರುವರಿ 2019 ರಂದು ಮಾರಾಟ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಖರೀದಿ ಸಂಚಗಾರ ಪತ್ರ ಹಾಗೂ ಒಪ್ಪಿಗೆ ಪತ್ರ ಕೂಡ ನೋಂದಣಿಯಾಗಿದೆ. ಆದರೆ ಇದೀಗ ದೇವನಗೌಡ ಅವರು ಜಮೀನಿನಲ್ಲಿ ಸೋಲಾರ್ ಅಳವಡಿಕೆ ಹಾಗೂ ಬೋರ್‌ವೆಲ್ ಆರಂಭಿಸಿದ್ದರಿಂದ ಕೂಡಲೆ ಸ್ಥಗಿತಗೊಳಿಸಿ ಎಂದು ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬಿಳಗಿ ನೋಟಿಸ್ ಜಾರಿಮಾಡಿದ್ದಾರೆ.
ಇದರಿಂದ ರೈತ ಕಂಗಾಲಾಗಿದ್ದಾನೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ನೋಟಿಸ್ ಹಾಗೂ ಕಿರುಕುಳದಿಂದ ಮನನೊಂದಿದ್ದೇನೆ. ಹೀಗೆ ಮುಂದುವರೆದ್ರೆ ಪುರಸಭೆ ಮುಖ್ಯಾಧಿಕಾರಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದೇವನಗೌಡರು ಹೇಳಿದ್ದಾರೆ. ಇದು ಕೃಷಿ ಅಥವಾ ಶೇತ್ಕಿ ಜಮೀನು ಆಗಿರುವುದರಿಂದ ಇದರಲ್ಲಿ ಪುರಸಭೆ ಅಧಿಕಾರಿಗಳು ಎಂಟ್ರಿಯಾಗುವಂತಿಲ್ಲ. ಇದು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಅಧಿಕಾರಕ್ಕೆ ಬರುತ್ತದೆ. ಆದರೂ ಪುರಸಭೆ ಅಧಿಕಾರಿ ಮಹಾಂತೇಶ ಬಿಳಗಿ ಎಂಟ್ರಿಯಾಗಿದ್ದಾರೆ. ಸ್ಥಳೀಯ ಕೆಲವರ ಪ್ರಭಾವಕ್ಕೆ ಒಳಗಾಗಿ ನೋಟಿಸ್ ನೀಡಿದ್ದಾರೆ ಎಂದು ರೈತ ದೇವನಗೌಡರ ಆರೋಪಿಸಿದ್ದಾರೆ.
ಮೂರು ವರ್ಷದ ಹಿಂದೆಯೇ ಬೋರ್‌ವೆಲ್ ಕೊರೆಸಲಾಗಿತ್ತು ಅದರೆ ನೀರು ಬಿದ್ದಿರಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿದಕ್ಕೆ ಬೋರ್‍ವೆಲ್ ನಲ್ಲಿ ನೀರು ಬರುತ್ತಿದೆ. ಅದಕ್ಕೆ ರೈತ ಸೋಲಾರ್ ಅಳವಡಿಸಿ ಬೋರ್‌ವೆಲ್ ಆರಂಭಿಸಿದ್ದಾನೆ. ಈಗ ಸೋಲಾರ್ ಅಳವಡಿಕೆ ಹಾಗೂ ಬೋರ್‍ವೆಲ್ ಆರಂಭಿಸಿದಕ್ಕೆ ಪುರಸಭೆಯಿಂದ ಪರವಾನಿಗೆ ಪಡೆಯಿರಿ. ಇಲ್ಲವಾದ್ರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸುವ ನೋಟಿಸ್ ನೀಡಿದ್ದಾರೆ.
ರೈತ ಈಗಾಗಲೇ ಉಣಚಗೇರಿ ಗ್ರಾಮಲೆಕ್ಕಾಧಿಕಾರಿಯಿಂದ ಪರವಾನಿಗೆ ಸಹ ಪಡೆದಿದ್ರೂ ಗಜೇಂದ್ರಗಡ ಪುರಸಭೆ ಅಧಿಕಾರಿ ಮಹಾಂತೇಶ ಬಿಳಗಿ ಹಾಗೂ ಸಿಬ್ಬಂದಿ ನಿತ್ಯ ಕಿರುಕುಳ ನೀಡ್ತಿದ್ದಾರೆ ಎಂದು ರೈತ ಆರೋಪಿಸಿದ್ದಾನೆ. ಈ ಬಗ್ಗೆ ಅಧಿಕಾರಿಯನ್ನು ಕೇಳಿದರೆ ನೋಟಿಸ್ ನೀಡಿದ್ದು ನಿಜ. ಸೂಕ್ತ ದಾಖಲೆಗಳನ್ನ ಕೊಟ್ಟರೆ ಪರಿಶೀಲನೆ ಮಾಡುತ್ತೇವೆ. ಕಿರುಕುಳ ನೀಡಿಲ್ಲ ಎಂದು ಮಹಾಂತೇಶ ಬಿಳಗಿ ಆರೋಪವನ್ನು ತಳ್ಳಿಹಾಕುತ್ತಿದ್ದಾರೆ.