ಗದಗ: ನಗರದ 12 ಕಡೆಗಳಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಬೆಟಗೇರಿ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ಲಕ್ಷ ಲಕ್ಷ ರೂ. ಹಣದ (Money) ಕಂತೆಗಳು ಪತ್ತೆಯಾಗಿವೆ.
ಗದಗ (Gadag) ಹಾಗೂ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಿಂದ ನಿದ್ದೆಯಲ್ಲಿದ್ದ ಬಡ್ಡಿ ದಂಧೆಕೋರರು ಕಂಗಾಲಾಗಿದ್ದಾರೆ. ದಾಳಿ ವೇಳೆ ಮನೆಗಳಲ್ಲಿ 26.57 ಲಕ್ಷ ರೂ. ನಗದು ಪತ್ತೆಯಾಗಿದೆ. ಅಲ್ಲದೇ ಖಾಲಿ ಚೆಕ್‌ಗಳು, ದಾಖಲೆಗಳು ಪತ್ತೆಯಾಗಿವೆ.
ಈ ಬಗ್ಗೆ ಮಾತಾಡಿರುವ ಎಸ್ಪಿ ಬಿ.ಎಸ್ ನೇಮಗೌಡ, ಅದರಲ್ಲಿ ಸಂಗಮೇಶ ದೊಡ್ಡಣ್ಣವರ ಎಂಬವರ ಮನೆಯಲ್ಲಿ 26.57 ಲಕ್ಷ ನಗದು, ಖಾಲಿ ಬಾಂಡ್, ಚೆಕ್ ಗಳು ಪತ್ತೆಯಾಗಿವೆ. ರವಿ ಕೌಜಗೇರಿ ಎಂಬವನ ಮನೆಯಲ್ಲಿ ಚೆಕ್‌ಗಳು, ಬಾಂಡ್ ಪೇಪರ್ಸ್, ಹಣ ಎಣಿಸುವ ಮಷಿನ್ ಪತ್ತೆಯಾಗಿದೆ. ಈ ಸಂಬಂಧ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಕೆಲವರು ರಿಜಿಸ್ಟರ್ ಮಾಡಿ ವ್ಯವಹಾರ ಮಾಡುತ್ತಿದ್ದಾರೆ. ಕೆಲವರು ಅನಧಿಕೃತವಾಗಿ ವ್ಯವಹಾರ ಮಾಡುತ್ತಿದ್ದಾರೆ. ಧಮ್ಕಿ, ಬೆದರಿಕೆ ಹಾಕಿ ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಬಡ್ಡಿ ದಂಧೆಯಲ್ಲಿ ರೌಡಿಶೀಟರ್‌ಗಳು ಭಾಗಿಯಾಗಿದ್ದಾರೆ. ರೌಡಿಶೀಟರ್‌ಗಳಾದ ದರ್ಶನ್, ಉಮೇಶ್ ಸುಂಕದ, ಉದಯ ಸುಂಕದ ಮಾರುತಿ ಮುತಗಾರ, ಶಿವರಾಜ್ ಹಂಸನೂರ, ವಿಜಯ ಸೋಳಂಕಿ ಹಾಗೂ ಶ್ಯಾಮ್ ಕುರಗೋಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.