ಗದಗ: ಮಂಗಳೂರಿಗೆ ಗುಳೆಹೋಗಿದ್ದ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ ಕೂಲಿ ಕಾರ್ಮಿಕನೋರ್ವ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದನು. ಹೀಗೆ ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಲ್ಲಿಗನೂರು ಗ್ರಾಮದ ನಿವಾಸಿ ಗುರುಸಂಗಪ್ಪ ಜಂಗಣ್ಣವರ(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಗುರುಸಂಗಪ್ಪ ದುಡಿಯಲು ಮಂಗಳೂರಿಗೆ ಹೋಗಿದ್ದನು. ಮೂರು ದಿನಗಳ ಹಿಂದೆ ಕಲ್ಲಿಗನೂರು ಗ್ರಾಮಕ್ಕೆ ವಾಪಸ್ ಆಗಿದ್ದನು. ಆದ್ರೆ ಗ್ರಾಮಕ್ಕೆ ಬಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ತಪಾಸಣೆ ಮಾಡಿದ್ದ ವೈದ್ಯರು ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದರು.
Advertisement
Advertisement
ಆದರೂ ಕೊರೊನಾ ವೈರಸ್‍ನ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸೋಂಕು ತಗುಲಿರಬಹುದು ಎಂದು ಗುರುಸಂಗಪ್ಪ ಭಯಗೊಂಡಿದ್ದನು. ಇದೇ ಭಯದಲ್ಲಿ ಮಂಗಳವಾರ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಗುರುಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗುರುಸಂಗಪ್ಪ ತನಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಂಡಿದ್ದರು, ಆ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.