ಗದಗ: ನಿರ್ಮಿತಿ ಕೇಂದ್ರದ (Nirmithi Kendra) ಪಾಜೆಕ್ಟ್ ಎಂಜಿನಿಯರ್ ಖಾಸಗಿ ಹೋಟೆಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ಹೊಸ ಬಸ್ ನಿಲ್ದಾಣದ (Gadag Bus Stand) ಬಳಿ ನಡೆದಿದೆ.
ಪಲ್ಲವಿ ಲಾಡ್ಜ್‌ನ ರೂಮ್ ನಂಬರ್ 513 ರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಶಂಕರಗೌಡ ಪಾಟೀಲ(54) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲ ಹಾತಲಗೇರಿ ನಿವಾಸಿಯಾಗಿದ್ದು, ಹತ್ತಾರು ವರ್ಷಗಳಿಂದ ಗದಗ ನಗರದ ಹಾತಲಗೇರಿ ನಾಕಾ ಬಳಿಯ ನಿವಾಸಿಯಾಗಿದ್ದರು. ಗದಗ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ರೋಣ ತಾಲೂಕಿನ ನಿರ್ಮಿತಿ ಕೇಂದ್ರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಇಂದು (ಡಿ.03) ಬೆಳಿಗ್ಗೆ 7:30 ರ ಸುಮಾರಿಗೆ ಸೈಟ್ ವಿಸಿಟ್ ಮಾಡಿ ಬರುವುದಾಗಿ ಮನೆಯವರ ಬಳಿ ಹೇಳಿ ಹೊರಬಂದಿದ್ದಾರೆ. ಮನೆಯಿಂದ ಬಂದು ಪಲ್ಲವಿ ಲಾಡ್ಜ್‌ನಲ್ಲಿ ಹಗ್ಗದೊಂದಿಗೆ ನೇಣಿಗೆ ಶರಣಾಗಿದ್ದಾರೆ.
ಶಂಕರಗೌಡನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಶಂಕರ್‌ಗೌಡ ಪಾಟೀಲ ಯಾವುದೇ ಸಾಲ ಮಾಡಿರಲಿಲ್ಲ. ಬೇರೆ ಯಾರಿಗೋ ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡು ತಾನು ಜವಾಬ್ದಾರಿ ತೆಗೆದುಕೊಂಡಿದ್ದರು. ಅವರು ಸಮಯಕ್ಕೆ ಸರಿಯಾಗಿ ಹಣ ಕೊಡದಕ್ಕೆ ಜವಾಬ್ದಾರಿ ಉಸ್ತುವಾರಿ ವಹಿಸಿಕೊಂಡಿದ್ದ ಶಂಕರಗೌಡ ಅವರನ್ನು ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಶಂಕರಗೌಡ ಸಾಲದ ಬಗ್ಗೆ ಅಥವಾ ಕೆಲಸ, ಅಧಿಕಾರಿಗಳು, ಸಿಬ್ಬಂದಿಗಳು ಕಿರುಕುಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ಕೊಠಡಿಗೆ ಪೊಲೀಸರು ನಮ್ಮನ್ನು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಣ್ಣ ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಈ ಬಗ್ಗೆ ತನಿಖೆ ಆಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ನಂತರ ಎಂಜಿನಿಯರ್ ಸಾವಿನ ಸತ್ಯಾಂಶ ಹೊರಬೀಳಲಿದೆ.