ಗದಗ: ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ (Maha Kumbh Mela) ತೆರಳಿದ್ದ ಜಿಲ್ಲೆಯ ಗ್ರಾಮ ಪಂಚಾಯತ್ ಸದಸ್ಯರ ಕುಟುಂಬಗಳ ಪೈಕಿ ಉಪಾಧ್ಯಕ್ಷೆ ಪುತ್ರ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ಜೊತೆ ಗ್ರಾ.ಪಂ ದುಡ್ಡಲ್ಲಿ ಸದಸ್ಯರು ಕುಂಭಮೇಳಕ್ಕೆ ಹೋಗಿದ್ದಾರೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.
ರೋಣ ತಾಲೂಕಿನ (Rona taluk) ಮಲ್ಲಾಪೂರ ಗ್ರಾಮ ಪಂಚಾಯತ್ (Mallapur Gram Panchayat) ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ ಅವರ ಪುತ್ರ 39 ವರ್ಷದ ಹನಮಂತ ಚಲವಾದಿ ಪ್ರವಾಸ ಮುಗಿಸಿ ಬರುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇವರು ಬಿಳಿ ಕಾಮಾಲೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರಿಂದ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಮೃತದೇಹವನ್ನು ಆಂಬುಲೆನ್ಸ್ ಮೂಲಕ ಸೋಮವಾರ ಮಲ್ಲಾಪೂರ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಗ್ರಾ.ಪಂ ಉಪಾಧ್ಯಕ್ಷೆಯ ಮಗ ಸಾವಿನ ಬೆನ್ನಲ್ಲೇ ಗ್ರಾ.ಪಂ ಸದಸ್ಯರ ಕುಟುಂಬಗಳು ಒಟ್ಟಾಗಿ ಪಂಚಾಯತ್ ದುಡ್ಡಲ್ಲೇ ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ತೆರಳಿದ್ದರು ಎಂಬ ಬಿಸಿಬಿಸಿ ಚರ್ಚೆ ಈಗ ಆರಂಭವಾಗಿದೆ. ಕಿಡ್ನಿ ವೈಫಲ್ಯ ಹಾಗೂ ಬಿಳಿ ಕಾಮಾಲೆಯಿಂದ ಬಳಲುತ್ತಿದ್ದ ಹನುಮಂತ ಚಲವಾದಿ ಅವರನ್ನು ಯಾಕೆ ಮಹಾಕುಂಭಮೇಳಕ್ಕೆ ಕರೆದೊಯ್ಯಲಾಯಿತು ಎಂದು ಜನರು ಈಗ ಪ್ರಶ್ನಿಸುತ್ತಿದ್ದಾರೆ.
ಮಲ್ಲಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರುವ ಸಂದಿಗವಾಡ ಗ್ರಾಮದಲ್ಲಿ ಒಟ್ಟು 13 ಜನ ಸದಸ್ಯರಿದ್ದು, ಆ ಪೈಕಿ ಅಧ್ಯಕ್ಷ ಹನಮಂತಗೌಡ ಹುಲ್ಲೂರ, ಉಪಾಧ್ಯಕ್ಷೆ ಪುತ್ರ ಹನುಮಂತ ಚಲವಾದಿ ಹಾಗೂ 11 ಸದಸ್ಯರು ಸೇರಿ ಒಟ್ಟು 24 ಜನರು ಫೆ. 16ರಂದು ಖಾಸಗಿ ವಾಹನ ಬಾಡಿಗೆ ಪಡೆದು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಉಪವಾಸ ಮಾಡುವುದ್ಯಾಕೆ?
ಹಣ ದುರ್ಬಳಕೆ ಆರೋಪ: ಗ್ರಾ.ಪಂ ಅಧ್ಯಕ್ಷ ಸೇರಿ 11 ಸದಸ್ಯರು ಗ್ರಾಪಂ ದುಡ್ಡನ್ನು ದುರ್ಬಳಕೆ ಮಾಡಿಕೊಂಡು ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಗ್ರಾ.ಪಂ ಅಧ್ಯಕ್ಷ ಹನಮಂತಗೌಡ ಹುಲ್ಲೂರ ಅವರು ಗ್ರಾ.ಪಂ ದುಡ್ಡನ್ನು ಬಳಸಿಕೊಂಡಿಲ್ಲ. ಎಲ್ಲ ಸದಸ್ಯರೂ ಕೂಡಿಕೊಂಡು ಬೇರೆಯವರ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದು ಮಹಾಕುಂಭಮೇಳಕ್ಕೆ ತೆರಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಲ್ಲ ಸದಸ್ಯರು ಕೂಡಿಕೊಂಡು ಓರ್ವನ ಬಳಿ ಹಣ ತೆಗೆದುಕೊಂಡು, ಮುಂದೆ ವರ್ಷಾಂತ್ಯದಲ್ಲಿ ಸರಿಮಾಡಿ ಕೊಡುವುದಾಗಿ ಒಟ್ಟಾಗಿ ಮಾತುಕತೆ ಮಾಡಿಕೊಂಡು ಮಹಾಕುಂಭಮೇಳಕ್ಕೆ ತೆರಳಿದ್ದರು ಎಂಬ ಮಾತುಗಳನ್ನು ಜನ ಈಗ ಆಡಿಕೊಳ್ಳುತ್ತಿದ್ದಾರೆ.
ಪಿಡಿಒ ದೇವರಡ್ಡಿ ಹಂಚಿನಾಳ ಪ್ರತಿಕ್ರಿಯಿಸಿ, ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಸದಸ್ಯರು ತೆರಳಿದ್ದ ಬಗ್ಗೆ ತಮಗೆ ಮಾಹಿತಿ ಇಲ್ಲ. ಮುಂದೆ ಪಂಚಾಯತ್ ಹಣ ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.