ಕಾಲಗರ್ಭ ಸೇರುತ್ತಿವೆ ಗದಗ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳು

Public TV
2 Min Read
GDG Historical temple

ಗದಗ: ಕರ್ನಾಟಕ ವಾಸ್ತು ಶಿಲ್ಪ ಚರಿತ್ರೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲ್ಪಕಲೆ ಬಂಗಾರದ ಸಂಪುಟ ಎನ್ನಲಾಗುತ್ತಿದೆ. ಇಂಥ ಭವ್ಯ ವಾಸ್ತು ಕಲೆಯ ಸಂಪದವನ್ನು ಪಡೆದ ಭಾಗ್ಯ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಗಿದೆ.

ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿನ 12ನೇ ಶತಮಾನದ ಚಾಲುಕ್ಯರ ಕಾಲದ ಐತಿಹಾಸಿಕ ಕಲ್ಮೇಶ್ವರ ಸ್ಮಾರಕವೂ ಸೂಜಿಗಲ್ಲಿನಂತೆ ನೋಡುಗರನ್ನು ಸೆಳೆಯುತ್ತದೆ. ಆದರೆ ಈ ವಾಸ್ತುಶಿಲ್ಪಗಳಿಗೆ ರಕ್ಷಣೆ, ಸೂಕ್ತ ನಿರ್ವಹಣೆಯಿಲ್ಲದ ಪರಿಣಾಮ ಕಾಲಗರ್ಭ ಸೇರುವ ತವಕದಲ್ಲಿದೆ ಎಂಬುವುದು ಬೇಸರದ ಸಂಗತಿ.

GDG Historical temple B

ಅಧ್ಯಾತ್ಮಿಕ ಸಾಧನೆಯ ಕುರುಹುಗಳ ಸ್ಥಾನವಾಗಿರುವ ಈ ಕಲ್ಯಾಣದ ದೇವಾಲಯ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ಪಡೆದಿದೆ. ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ನವರಂಗದ ರಚನೆಯಾಗಿರುವ ಎತ್ತರದ ಕಟ್ಟೆಯನ್ನು ಇದುವರೆಗೂ ಕಾಣುತ್ತೇವೆ. ಸ್ವಲ್ಪಮಟ್ಟಿಗೆ ವಿಸ್ತಾರವಾಗಿರುವ ಗರ್ಭಗೃಹವು ಲಿಂಗವನ್ನು ಹೊಂದಿರುವುದು. ಮೇಲ್ಭಾಗದಲ್ಲಿ ಅಲಂಕರಣೆ ಚಿತ್ರಗಳನ್ನು ಬಿಡಿಸಲಾಗಿದೆ. ಗರ್ಭಗೃಹದ ಒಳಗೋಡೆಯಲ್ಲಿ ಸುತ್ತಲೂ ಕಟ್ಟೆಯನ್ನು ರಚಿಸಿದ್ದಾರೆ. ಬಾಗಿಲವಾಡವು ಪಟ್ಟಿಕೆಗಳನ್ನು ಹೊಂದಿರುವುದು ಅಲ್ಲದೇ, ಅದು ಸಾದಾ ರಚನೆಯಿಂದ ಕೂಡಿದೆ. ದೇವಾಲಯದ ಅಂತರಾಳವು ಬರಿದಾಗಿದೆ. ಅದರ ಬಾಗಿಲವಾಡವು ಪಂಚ ಪಟ್ಟಿಕೆಗಳಿಂದ ರಚನೆಯಾಗಿದೆ.

GDG Historical temple A

ಪ್ರಾಚೀನ ದೇವಾಲಯದ ಅಧಿಷ್ಠಾನ ಹಾಗೂ ಹೊರ ಗೋಡೆಯ ಭಾಗಗಳು ಹೆಚ್ಚಿನ ಅಲಂಕರಣೆಯಿಂದ ಕೂಡಿವೆ. ಅಧಿಷ್ಠಾನ ಭಾಗವು ಉಪಾನ, ಜಗತಿಗಳ, ಕಪೋತ ಹಾಗೂ ತ್ರಿಪಟ್ಟಕುಮುದ ರಚನೆಯನ್ನು ಸ್ಪಷ್ಟವಾಗಿ ಹೊಂದಿದೆ. ಅಧಿಷ್ಠಾನದಲ್ಲಿರುವ ಜಗತಿ ಭಾಗವು ಸ್ವಲ್ಪಮಟ್ಟಿಗೆ ಎತ್ತರದವಾಗಿದೆ. ಹೊರಗೋಡೆಯು ಅನೇಕ ರೀತಿಯ ಅಲಂಕರಣೆಯಿಂದ ಕೂಡಿದೆ. ಅರ್ಧ ಕಂಬಗಳನ್ನು ಪಂಚಶಾಖೆಯನ್ನು ಹೊಂದಿರುವ ಕಂಬಗಳ ಅಲಂಕರಣೆ ಹಾಗೂ ಹೊರಗೋಡೆಯಲ್ಲಿ ಕೆತ್ತಿರುವ ಅರ್ಧಕಂಬಗಳ ಮೇಲೆ ಚಿಕ್ಕ ಶಿಖರಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ಕೀರ್ತಿಮುಖ, ಯಾಳಿ ಹಾಗೂ ಗಜ ಸವಾರಿ ಅಲಂಕಾರವನ್ನು ಗೋಡೆಯ ಭಾಗದಲ್ಲಿ ವಿಶೇಷವಾಗಿ ಕೆತ್ತಲಾಗಿದೆ.

ಗರ್ಭಗೃಹದ ಹೊರಗೋಡೆಯಲ್ಲಿ ಮೂರು ಕಡೆಗಳಲ್ಲಿ ಕೋಷ್ಟಗಳಿವೆ. ಇಲ್ಲಿರುವ ಎಲ್ಲ ಕೋಷ್ಠಗಳು ಬರಿದಾಗಿವೆ. ಅವುಗಳ ಮೇಲಿನ ಶಿಖರ ರಚನೆ ಆಕರ್ಷಕವಾಗಿದೆ. ಈ ಶಿಖರ ಕೆತ್ತನೆಯಲ್ಲಿ ಏಳು ತಲಗಳನ್ನು ನಿರ್ಮಿಸಿದ್ದು ಪ್ರತಿ ತಲದಲ್ಲಿ ಕೀರ್ತಿಮುಖ ಹಾಗೂ ಕಪೋತಗಳನ್ನು ರಚಿಸಿದ್ದಾರೆ. ಚಿಕ್ಕ ಶಿಖರದಲ್ಲಿ ಎರಡು ತಲಗಳ ನಂತರ ಅರ್ಧಕಂಬಗಳ ಮಂಟಪವನ್ನು ಕಂಡರಿಸಲಾಗಿದೆ. ಶಿಖರವು ಗ್ರೀವ, ಕಳಸ, ಮತ್ತು ಸ್ಥೂಪಿ ಭಾಗಗಳನ್ನು ಸಹ ಹೊಂದಿದೆ.

GDG Historical temple C

ದೇವಾಲಯದ ಮೇಲ್ಛಾವಣಿ ಹಾಗೂ ಶಿಖರವು ಸಂಪೂರ್ಣವಾಗಿ ಬಿದ್ದುಹೋಗಿದೆ. ಗೋಪುರ ಇಲ್ಲ, ಮುಂಭಾಗಕ್ಕೆ ಹಾಗೂ ಒಳಮೈಗೆ ಸುಣ್ಣವನ್ನು ಬಳೆಯಲಾಗಿದೆ. ದೇವಸ್ಥಾನದ ಎದುರಿಗೆ ನಂದಿ ಇದೆ. ಆದರೆ ಅದರ ಮುಖವೇ ಇಲ್ಲ. ಸ್ಥಳೀಯವಾಗಿ ಸಿಗುವ ಕಲ್ಲು-ಗಾರೆಗಳಿಂದ ಮೇಲ್ಛಾವಣೆಯನ್ನು ಮಾತ್ರ ದುರಸ್ತಿಗೊಳಿಸಲಾಗಿದೆ. ಸುಂದರವಾದ ಕೆತ್ತನೆಗಳಿಂದ ಕೂಡಿರುವ ಈ ಪ್ರಾಚೀನ ದೇವಾಲಯದ ಬಗೆಗೆ ಯಾವುದೇ ಲಿಖಿತ ಮಾಹಿತಿಗಳು ಲಭ್ಯವಿಲ್ಲ. ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಭವ್ಯ ಸ್ಮಾರಕವನ್ನು ಸಂರಕ್ಷಿಸಿ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *