ಗದಗ: ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಬಂಡೆಗಳು ಉರುಳಿಬಂದು ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿರುವ ಘಟನೆ ಗಜೇಂದ್ರಗಡ ತಾಲೂಕಿನ ಬೊಮ್ಮಸಾಗರದಲ್ಲಿ ನಡೆದಿದೆ.
ಬೊಮ್ಮಸಾಗರಕ್ಕೆ ಹೊಂದಿಕೊಂಡು ಬೃಹತ್ ಗುಡ್ಡವಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯಲು ಆರಂಭಿಸಿದ್ದು, ಗುರುವಾರ ಭಾರೀ ಅನಾಹುತ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Advertisement
Advertisement
ಗುಡ್ಡ ಕುಸಿತದಿಂದಾಗಿ ಬೃಹದಾಕಾರದ ಬಂಡೆಗಳು ಗ್ರಾಮದ ಕಡೆಗೆ ಉರುಳಿ ಬರುತ್ತಿವೆ. ಪರಿಣಾಮ ಬೊಮ್ಮಸಾಗರ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿದೆ. ಅದೃಷ್ಟವಶಾತ್ ಈ ವೇಳೆ ಉಗ್ರಾಣದಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಆದರೆ ಗ್ರಾಮವು ಗುಡ್ಡದ ಅಡಿಯಲ್ಲೇ ಇರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
Advertisement
ಗ್ರಾಮಕ್ಕೆ ಗಜೇಂದ್ರಗಡದ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಯಾವುದೇ ಪ್ರಾಣ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.