Connect with us

Districts

‘ಕಾಲುವೆಗೆ ಮಲಪ್ರಭೆ ನೀರು ಬಿಡಿ’ – ನೀರಾವರಿ ನಿಗಮ ಕಚೇರಿಗೆ ಬೀಗ ಜಡಿದು ರೈತರ ಆಕ್ರೋಶ

Published

on

ಗದಗ: ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೊಳಗಾದ ಜನರು ಆಗ ಪ್ರವಾಹ ಸಂದರ್ಭದಲ್ಲಿ ನೀರು ಸಾಕಪ್ಪಾ ಸಾಕು ಅಂದಿದ್ದರು. ಆದರೆ ಈಗ ಹಿಂಗಾರು ಬೆಳೆಗಳಿಗೆ ಸ್ವಲ್ಪ ನೀರುಬಿಟ್ಟು ಪುಣ್ಯ ಕಟ್ಟಿಕೊಳ್ಳಿ ಅಂತಿದ್ದಾರೆ ಗದಗ ಜಿಲ್ಲೆ ನರಗುಂದ ತಾಲೂಕಿನ ಜನರು.

ರೈತರ ಬೆಳೆಗಳಿಗೆ ಸಮರ್ಪಕ ನೀರು ಪೂರೈಸದ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ನೀರಾವರಿ ಕಚೇರಿಗಳಿಗೆ ರೈತರು ಬೀಗ ಜಡಿದು ಪ್ರತಿಭಟಿಸಿದ್ದಾರೆ. ತಾಲೂಕಿನ ಹದ್ಲಿ ಗ್ರಾಮದ ರೈತರು, ಕಾಲುವೆ ನೀರಿಗಾಗಿ ಪ್ರತಿಭಟನೆ ಮಾಡಿದರು. ಮಲಪ್ರಭೆಯ ಬಲದಂಡೆ ಕಾಲುವೆಗೆ ಗಂಗಾಪೂರ-ಹದ್ಲಿ ಬಳಿ ಜಾಕ್ವೇಲ್ ನಿರ್ಮಿಸಿ ಮೂರು ವರ್ಷದಲ್ಲಿ ಕೇವಲ ಒಂದು ಸಾರಿ ಮಾತ್ರ ನೀರು ಹರಿಸಿದ್ದಾರೆ. ಕಳೆದ 2 ವರ್ಷದಿಂದ ಜಾಕ್ವೆಲ್ ಬಂದ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗಾಪೂರ ಹಾಗೂ ಹದ್ಲಿಯ ಇಬ್ಬರು ರೈತರು ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿದ್ದು, ಇದುವರೆಗೂ ಆ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಪರಿಹಾರ ನೀಡುವವರೆಗೂ ಜಾಕ್ವೆಲ್ ಬಂದ್‍ಗೆ ನೊಂದ ರೈತರು ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನಲೆ ಗಂಗಾಪೂರ ಬಳಿಯ ಕಾಲುವೆಗೆ ಈಗ ನೀರು ಹರಿಯುತ್ತಿಲ್ಲ. ಕೂಡಲೇ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿ, ನೀರು ಒದಗಿಸಬೇಕೆಂಬುದು ಇನ್ನುಳಿದ ರೈತರ ಆಗ್ರಹಿಸಿದರು.

ಮುಂಗಾರಿನಲ್ಲಿ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಈಗ ಹಿಂಗಾರು ಬೆಳೆಯಾದ ಗೋಧಿ, ಕಡಲೆ, ಬಿಳಿ ಜೋಳ ಹಾಕಲಾಗಿದೆ. ಅವುಗಳಿಗೆ ನೀರಿನ ಅವಶ್ಯಕತೆ ಇದೆ. ನೀರು ಬಿಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿಹೋದ ರೈತರು ನರಗುಂದ ನೀರಾವರಿ ನಿಗಮ ಕಚೇರಿಗೆ ನುಗ್ಗಿ, ಕರ್ತವ್ಯ ನಿರತ ಅಧಿಕಾರಿಗಳನ್ನು ಹೊರಹಾಕಿ ಕೊಠಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಹದಲಿ, ಗಂಗಾಪೂರ ಗ್ರಾಮದ ಬಳಿ ನಿರ್ಮಿಸಿರುವ ಜಾಕ್ವೇಲ್‍ಗಳಿಂದ ನೀರು ಪೂರೈಕೆಯಾಗಬೇಕೆಂದು ಆಗ್ರಹಿಸಿದರು. ನರಗುಂದ ನೀರಾವರಿ ವಿಭಾಗ 2ರ ಸಹಾಯಕ ಕಾರ್ಯನಿವಾಹಕ ಅಭಿಯಂತರ ಅಧಿಕಾರಿಗಳಾದ ಮೋನಿ ಪಾಟೀಲ್, ಸುಧಾಕರ್, ಎಸ್.ಎಲ್ ಪಾಟೀಲ್ ಅವರನ್ ತರಾಟೆಗೆ ತೆಗೆದುಕೊಂಡರು. ಕಚೇರಿ ಎದುರು ಒಲೆಯನ್ನು ಮಾಡಿ, ಅಲ್ಲಿಯೇ ಅಡುಗೆ ಮಾಡಲು ರೈತರು ಮುಂದಾದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಅಧಿಕಾರಿಗಳು ಆದಷ್ಟು ಬೇಗ ಕಾಲುವೆಗೆ ನೀರು ಹರಿಸುವುದಾಗಿ ರೈತರಿಗೆ ಭರವಸೆ ನೀಡಿದರು.

Click to comment

Leave a Reply

Your email address will not be published. Required fields are marked *