ಗದಗ: ಸತತ ಭೀಕರ ಬರ ರೈತರನ್ನು ಹೈರಾಣ ಮಾಡಿದೆ. ಆದರೆ ಈ ಭೀಕರ ಬರವನ್ನು ಮೆಟ್ಟಿನಿಂತ ರೈತರೊಬ್ಬರು ಬಂಗಾರದಂತ ಪಪ್ಪಾಯಿ ಬೆಳೆದು ಕೈತುಂಬಾ ಝಣ ಝಣ ಕಾಂಚಾಣ ಎಣಿಸುತ್ತಿದ್ದಾರೆ. ಸಮಗ್ರ ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತು ಈ ಅಕ್ಷರಶಃ ಈ ರೈತ ಸತ್ಯ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜೀಗೇರಿ ಗ್ರಾಮದ ಪರಶುರಾಮ್ ಸಮಗ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ಬೆಳೆದು ಮಾದರಿ ರೈತರಾಗಿದ್ದಾರೆ. ಇವರ ಜಮೀನಲ್ಲಿ 5 ಎಕ್ರೆ ಪಪ್ಪಾಯಿ, 10 ಎಕ್ರೆ ನಿಂಬೆಹಣ್ಣು, 3 ಎಕ್ರೆ ವಿಳ್ಳೆದೆಲೆ ತೋಟ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರ ಜೊತೆ ಮೆಕ್ಕೆಜೋಳ, ಹತ್ತಿ, ತೊಗರಿ, ಶೇಂಗಾ ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ರೈತ ಪರಶುರಾಮ ಕೃಷಿನಲ್ಲಿ ಸಾಧನೆ ಮಾಡಲು ಪಣತೊಟ್ಟು ಹಗಲಿರುಳು ದುಡಿಯುತ್ತಿದ್ದಾರೆ.
Advertisement
Advertisement
ಸದ್ಯ ಸಾವಯವ ಕೃಷಿಯ ಪದ್ಧತಿ ಮೂಲಕ “ತೈವಾನ್ ರೆಡ್ ಲೇಡಿ” ಎಂಬ ಮಹಾರಾಷ್ಟ್ರ ಮೂಲದ ಪಪ್ಪಾಯಿ ತಳಿ ಬೆಳೆಯುತ್ತಿದ್ದಾರೆ. ಪರಶುರಾಮ್ ಬೆಳೆದ ಪಪ್ಪಾಯಿ ಬೆಳೆ ಕೇವಲ ಕರ್ನಾಟಕ ಮಾತ್ರವಲ್ಲ ನೆರೆಯ ಗೋವಾ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಅನೇಕ ರಾಜ್ಯಗಳಿಗೂ ಸರಬರಾಜು ಆಗುತ್ತವೆ. ಬರಗಾಲದಲ್ಲೂ ಅದ್ಭುತ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
Advertisement
Advertisement
ಈ ಬಗ್ಗೆ ಮಾತಿನಾಡಿದ ಪರಶುರಾಮ್ ಅವರು, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ಬೆಳೆ ಬೆಳೆಯುತ್ತಿದ್ದೇನೆ. 5 ಎಕ್ರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿಯಲ್ಲಿ ಸದ್ಯ 5 ರಿಂದ 10 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದ್ದಾರೆ. ಪರಶುರಾಮ ಅವರು ಕೆಲವು ವರ್ಷಗಳ ಹಿಂದೆ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ, ತೊಗರಿ, ಹತ್ತಿ, ಕಡಲೆ, ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದು ಲಾಭವಿಲ್ಲದೆ ಕೈ ಸುಟ್ಟುಕೊಂಡಿದ್ದರು. ಹನಿ ನೀರಾವರಿ ಪದ್ಧತಿಯ ಮೂಲಕ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.
ತೋಟದಲ್ಲಿ ಪಪ್ಪಾಯಿ, ನಿಂಬೆಹಣ್ಣು, ವಿಳ್ಳೆದೆಲೆ ತೋಟ, ಜೇನು ಸಾಗಾಣಿಕೆ ಮಾಡಿಕೊಂಡಿರುವುದಲ್ಲದೆ, ಹೈನುಗಾರಿಕೆಗೆ ಅತ್ತ ಕೂಡ ಮುಖ ಮಾಡಿದ್ದಾರೆ. ಈ ಎಲ್ಲಾ ಸಮಗ್ರ ಕೃಷಿಯಿಂದ ಸುಮಾರು ಒಂದು ವರ್ಷಕ್ಕೆ 8 ರಿಂದ 10 ಲಕ್ಷ ರೂಪಾಯಿವರಿಗೆ ಆದಾಯಗಳಿಸುವ ಕಾಯಕ ಯೋಗಿ ಆಗಿದ್ದಾರೆ. ಪರಶುರಾಮ ಅವರ ಸಮಗ್ರ ಕೃಷಿ ನೋಡಿದರೆ ನಮಗೂ ಖುಷಿ ತಂದಿದೆ. ನಾವು ಹೀಗೆ ಕೃಷಿಮಾಡಲು ಸ್ಪೂರ್ತಿಯಾಗಿದೆ ಎಂದು ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.