ಗದಗ: ಮೂವರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸದ್ಯ ಗದಗ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 5 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದವು. ಅವುಗಳ ಪೈಕಿ 80 ವರ್ಷದ ವೃದ್ಧೆ ರೋಗಿ-166 ಮೃತಪಟ್ಟಿದ್ದರು. ನಂತರ ನಾಲ್ಕು ಜನ ಗದಗ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 1ರಂದು 59 ವರ್ಷದ ಮಹಿಳೆ ರೋಗಿ-304 ಮೊದಲು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆ ನಂತರ 42 ವರ್ಷದ ರೋಗಿ-379, 24 ವರ್ಷದ ರೋಗಿ-396, 75 ವರ್ಷದ ರೋಗಿ-514 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Advertisement
Advertisement
ಈ ಮೂವರು ಕೂಡ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಇವರಿಗೆ ಇಂದು ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಇಂದು ಬಿಡುಗಡೆಗೊಂಡ ವ್ಯಕ್ತಿಗಳಿಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಬಳಿಕ ಮಾಸ್ಕ್, ಸ್ಯಾನಿಟೈಜರ್, ಆಹಾರ ಕಿಟ್ ನೀಡುವ ಮೂಲಕ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅವರನ್ನು ಗೌರವಿಸಿತು.
Advertisement
Advertisement
ಅಲ್ಲದೇ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಅವರಿಗೆ ಸೂಚಿಸಿ, ಮನೆಗೆ ಕಳುಹಿಸಿದೆ. ಗುಣಮುಖರಾದ ವ್ಯಕ್ತಿಗಳು ನಗು ನಗುತ್ತಾ ಆಸ್ಪತ್ರೆಯಿಂದ ಮನೆಗೆ ತೆರಳಿದರು. ಒಟ್ಟಿನಲ್ಲಿ ಗದಗ ಜಿಲ್ಲೆ ಇಂದು ಕೊರೊನಾ ಮುಕ್ತ ಜಿಲ್ಲೆಯಾಗಿರುವುದು ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.