ಗದಗ: ಸಿಮೆಂಟ್ ಲಾರಿಯೊಂದು ವೇಗವಾಗಿ ಬರುತ್ತಿದ್ದ ವೇಳೆ ರೋಡ್ ಬ್ರೇಕ್ ದಾಟುವಾಗ ಸ್ಟೇರಿಂಗ್ ಕಟ್ ಆಗಿ ರಸ್ತೆ ಪಕ್ಕ ಕಂದಕಕ್ಕೆ ಉರುಳಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣ ಹೊರವಲಯದಲ್ಲಿ ನಡೆದಿದೆ.
ಘಟನೆಯಿಂದ ಲಾರಿ ಮುಂದಿನ ಭಾಗ ಸಂಪೂರ್ಣ ಪೀಸ್ ಪೀಸ್ ಆಗಿದೆ. ಲಾರಿಯಲ್ಲಿ ಸಿಲುಕಿರುವ ಚಾಲಕ, ಕ್ಲೀನರ್ ನನ್ನು ಸ್ಥಳೀಯರು ಕೂಡಲೇ ರಕ್ಷಣೆ ಮಾಡಿ ಇಬ್ಬರ ಪ್ರಾಣ ಉಳಿಸಿದ್ದಾರೆ. ಲಾರಿ ಮುಂದಿನ ಭಾಗ ಜಖಂ ಆಗಿರುವುದನ್ನ ನೋಡಿದ್ರೆ ಪವಾಡ ಸದೃಶ ರೀತಿಯಲ್ಲಿ ಚಾಲಕ, ಕ್ಲೀನರ್ ಪಾರಾಗಿದ್ದಾರೆ.
ನರಳಾಡುತ್ತಿದ್ದ ಇವರನ್ನ ಸ್ಥಳೀಯ ಅನೇಕರು ದೇವರಂತೆ ಬಂದು ರಕ್ಷಣೆ ಮಾಡಿದ್ದಾರೆ. ಸುಮಾರು 600 ಸಿಮೆಂಟ್ ಬ್ಯಾಗ್ ತುಂಬಿಕೊಂಡು ಕಲಬುರಗಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸಿಮೆಂಟ್ ಲಾರಿ ಕಂದಕಕ್ಕೆ ಉರುಳಿದೆ. ಚಾಲಕ ಶಿವಕುಮಾರ ಶೆಟ್ಟಿ ಹಾಗೂ ಕ್ಲೀನರ್ ಇಸ್ಮಾಯಿಲ್ ಸಾಬ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರಿಗೂ ಗಾಯಗಳಾಗಿದ್ದು, ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಕ್ಲೀನರ್ ಇಬ್ಬರು ಕಲಬುರಗಿ ಜಿಲ್ಲೆ ಚಿಂಚೊಳ್ಳಿ ಹಾಗೂ ನಾಗರಾಳ ನಿವಾಸಿಗಳು ಎನ್ನಲಾಗಿದೆ. ಈ ಘಟನೆ ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.