ಗದಗ: ಗದಗ ತಾಲೂಕಿನ ಚಿಂಚಲಿ ಗ್ರಾಮದ ಬಳಿ ಹುಬ್ಬಳ್ಳಿ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಪಲ್ಟಿಯಾಗಿ ಐದು ಜನರಿಗೆ ಗಾಯಗಳಾಗಿವೆ.
ಹುಬ್ಬಳ್ಳಿಯಿಂದ ಕೋಳುವಾಡ, ಮುಳಗುಂದ ಮಾರ್ಗವಾಗಿ ಶಿರಹಟ್ಟಿಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿದೆ. ಮೇವು ತುಂಬಿದ ಟ್ರ್ಯಾಕ್ಟರ್‍ವೊಂದು ಜಮೀನಿನಿಂದ ರಸ್ತೆ ಕಡೆಗೆ ಬರುತ್ತಿತ್ತು. ಏಕಾಏಕಿ ಬಂದ ಟ್ರ್ಯಾಕ್ಟರ್ ಅನ್ನು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ರಸ್ತೆ ಪಕ್ಕಕ್ಕೆ ಉರುಳಿದೆ. ಈ ಸಮಯದಲ್ಲಿ ಟ್ರ್ಯಾಕ್ಟರ್ ಕೂಡಾ ಆಯತಪ್ಪಿ ಕಂದಕಕ್ಕೆ ಸಿಲುಕಿದೆ.
ಬಸ್ಸಿನಲ್ಲಿ ಇದ್ದ ಒಟ್ಟು 17 ಜನ ಪ್ರಯಾಣಿಕರ ಪೈಕಿ ಐದು ಜನರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.