ಹಳೆಯ ಶಾಲೆಗೆ ಹೊಸ ಸ್ಪರ್ಶ- ಕುವೆಂಪು ಶತಮಾನೋತ್ಸವ ಶಾಲೆ ಕಲರ್‌ಫುಲ್‌

Public TV
2 Min Read
GDG Main

ಗದಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಜಾಸ್ತಿ. ಇಂದಿನ ದಿನಗಳಲ್ಲಂತೂ ಖಾಸಗಿ ಶಾಲೆಗಳು ಹೆಚ್ಚಾಗುತ್ತಿರುವ ಪರಿಣಾಮ ಅದೆಷ್ಟೋ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಆದರೆ ಗದಗ ತಾಲೂಕಿನ ಅಸುಂಡಿ ಗ್ರಾಮದ ಹಳೆಯದಾದ ಕುವೆಂಪು ಶತಮಾನೋತ್ಸವದ ಸರ್ಕಾರಿ ಶಾಲೆಯು ಯಾವ ಖಾಸಗಿ ಶಾಲೆಗೆ ಕಮ್ಮಿಯಿಲ್ಲ ಎನ್ನುವಂತಿದೆ.

ಹಚ್ಚ ಹಸಿರುನಿಂದ ಕಂಗೊಳಿಸುವ ಶಾಲಾ ಪರಿಸರದಲ್ಲಿ ಮಕ್ಕಳು “ಅಕ್ಷರ” ಸಹ ಪಸರಿಸಿದ್ದಾರೆ. 2005ರಲ್ಲಿ ಈ ಶಾಲೆ ಶತಮಾನ ಕಂಡಿರುವುದರಿಂದ ಈಗ ಕುವೆಂಪು ಶತಮಾನೋತ್ಸವ ಶಾಲೆಯಾಗಿ, ಜಿಲ್ಲೆಗೆ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಸಾವಿರಾರು ಜನರ ಬಾಳು ಬೆಳಗಿದ ಜ್ಞಾನ ವಿದ್ಯಾದೇಗುಲವಿದು. ಸದ್ಯ 345 ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ದಾಖಲಾತಿ ಹೆಚ್ಚಿಸಿಕೊಳ್ಳುತ್ತಿದೆ.

GDG Main B 1

ಈ ವಿದ್ಯಾಪೀಠದಲ್ಲಿನ ಚಿಣ್ಣರ ಕೈಕುಂಚದಿಂದ ಅರಳತ್ತಿರುವ ಕಲಾಲೋಕದಿಂದ ಸಾಲು ಸಾಲು ಮರಗಳ ಸುಂದರ ಪರಿಸರದಲ್ಲಿ ಕಲರ್‍ಫುಲ್ ಅಕ್ಷರಗಳು ಮಿನುಗುತ್ತಿವೆ. ಹಚ್ಚ ಹಸಿರಿನ ನಡುವೆ ವಿದ್ಯಾರ್ಥಿಗಳ ಲೋಕವೇ ಅನಾವರಣವಾದಂತಿದೆ. ಈ ಸುಂದರ ಪ್ರಕೃತಿ ಮಡಿಲಲ್ಲಿ ವಿದ್ಯಾದೇವತೆ ಸರಸ್ವತಿಯೇ ಧರೆಗಿಳಿದು ಬರುವಂತಿದೆ. ಮೇಲಾಗಿ ಸರ್ಕಾರಿ ಶಾಲೆಗಳೆಂದರೆ ಒಂದು ಹೆಜ್ಜೆ ಹಿಂದೆಯಿಡುವ ವಿದ್ಯಾರ್ಥಿಗಳಿಗೆ ಈ ಶಾಲೆ ಮಾತ್ರ ಜ್ಞಾನಾರ್ಜನೆಯ ದೇಗುಲವಾಗಿದೆ.

ಕೇವಲ ನಾಲ್ಕು ಗೋಡೆಗಳ ಮಧ್ಯೆ ವಿದ್ಯೆ ಆಲಿಯುವ ವಿದ್ಯಾರ್ಥಿಗಳು ಇಲ್ಲಿನ ಸ್ವಚ್ಛ ಪರಿಸರದ ವಾತಾವರಣದಲ್ಲೇ ಪಾಠ ಕಲಿಯುತ್ತಾರೆ. ಹೆಸರೇ ಹೇಳುವಂತೆ ಕುವೆಂಪುವಿನ ರಸಕಾವ್ಯದ ಕವಿತೆಯಷ್ಟೇ ಪಾವಿತ್ರ್ಯತೆಯನ್ನು ಶಾಲೆ ಹೊಂದಿದೆ. ಇಲ್ಲಿಯ ಮಕ್ಕಳು ಇಲ್ಲಿಯ ಪರಿಸರ, ಶಿಕ್ಷಣ ನೋಡಿ ಖಾಸಗಿ ಶಾಲೆಯಿಂದ ನಮ್ಮ ಶಾಲೆಗೆ ಬರುತ್ತಿದ್ದಾರೆ. ಮನೆ ಸಿಂಗಾರ ಮಾಡಿದಂತೆ ನಮ್ಮ ಶಾಲೆಕೂಡ ಶೃಂಗಾರಗೊಂಡಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಹೇಳಿದ್ದಾರೆ.

GDG Main C 1

ವಿದ್ಯಾರ್ಥಿಗಳೇ ಕೈಯಲ್ಲಿ ಕುಂಚ ಹಿಡಿದು ಮರಗಳಿಗೆ ಅಲಂಕಾರ ಮಾಡಿ ಕಲಾಲೋಕವನ್ನು ಸೃಷ್ಠಿಸುತ್ತಿದ್ದಾರೆ. ಶಾಲಾ ಆವರಣದ ಪ್ರತಿ ಮರಗಳಲ್ಲಿಯೂ ತಮ್ಮ ಪಠ್ಯಾನುಸಾರದ ಚಿತ್ರಣಗಳನ್ನು ಬಿಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಯೂಟ್ಯೂಬ್, ವಾಟ್ಸಪ್, ಗೂಗಲ್, ಟ್ವಿಟರ್ ನಂತಹ ಮಾಹಿತಿ ಕೂಡ ಗಿಡಗಳಲ್ಲಿ ಚಿತ್ರಿಸಲಾಗಿದೆ. ಸೌರಮಂಡಲ, ಸೂರ್ಯಗ್ರಹಣ, ಚಂದ್ರ ಗ್ರಹಣ ಸೇರಿದಂತೆ ಹೀಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಣ್ಣಗಳ ಚಿತ್ತಾರದ ಮೂಲಕ ಪ್ರದರ್ಶಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯೇ ಗ್ರೇಟ್ ಅಂತ ತೋರಿಸುತ್ತಿದ್ದಾರೆ ಎಂದು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಬರುವುದಕ್ಕೆ ಖುಷಿಯಾಗುತ್ತದೆ. ಇಲ್ಲಿ ಗಿಡಗಳಿಗೆ ನೀರುನಿಸಿ ಮಕ್ಕಳಂತೆ ಜೋಪಾನ ಮಾಡಿದ್ದೇವೆ. ಶಾಲೆ ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವುದಿಲ್ಲ ಎಂದು ಶಾಲಾ ವಿದ್ಯಾರ್ಥಿಗಳು ಹೇಳುತ್ತಾರೆ.

GDG Main A 1

ಕುವೆಂಪು ಶತಮಾನೋತ್ಸವ ಸಂಭ್ರಮದಲ್ಲಿರುವ ಅಸುಂಡಿ ಶಾಲಾ ಆವರಣದಲ್ಲಿ 750ಕ್ಕೂ ಅಧಿಕ ವಿವಿಧ ಜಾತಿಯ ಗಿಡಮರಗಳಿವೆ. 200 ತೆಂಗು, 50 ಪಪ್ಪಾಯಿ, 50 ಪೇರಲ, 25 ಹುಣಸೆ, 90 ಮಾವು, 10 ಆಲದಮರ, ಬೇವು, 200 ತೇಗ ಸೇರಿದಂತೆ ನೂರಾರು ಗಿಡಗಳನ್ನು ನೆಡಲಾಗಿದೆ. ಸರ್ಕಾರದ ಅನುದಾನ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆದರು ಕೂಡ ಇಂದಿನ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚತ್ತಿವೆ. ಆದರೆ ಗದುಗಿನ ಅಸುಂಡಿ ಕುವೆಂಪು ಶಾಲೆ ಮಾತ್ರ ಇತರೆ ಶಾಲೆಗಳಿಗೆ ಸೃಜನಾತ್ಮಕ ಮಾದರಿ ಶಾಲೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *