ಗದಗ: ಕಟಾವ್ ಮಾಡಿ ಫ್ಯಾಕ್ಟರಿಗೆ ತಂದಿದ್ದ ಕಬ್ಬನ್ನು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮನಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ತಿಗರಿ ಗ್ರಾಮದ ಸಣ್ಣಹನುಮಪ್ಪ ತಿಗರಿ(55) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಮುಂಡರಗಿ ತಾಲೂಕಿನ ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ಆವರಣದಲ್ಲಿ ಸಣ್ಣಹನುಮಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ವಿವರ:
ತಿಗರಿ ಗ್ರಾಮದ ಸಣ್ಣಹನುಮಪ್ಪ ಅವರು ಕಬ್ಬು ಬೆಳೆದಿದ್ದರು. ಬೆಳೆ ಕಟಾವ್‍ಗೆ ಬಂದಿದ್ದರಿಂದ ಹಾಗೂ ಸಾಲದ ಹಣ ಪಾವತಿ ಮಾಡುವ ಉದ್ದೇಶದಿಂದ ಫ್ಯಾಕ್ಟರಿ ಮಾಲೀಕರಿಗೆ ಕಟಾವ್ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಮಾಲೀಕರು ವಿಳಂಬ ಮಾಡಿದ್ದರಿಂದ ಸಣ್ಣಹನುಮಪ್ಪ ಅವರು ತಮ್ಮ ಕಾರ್ಮಿಕರನ್ನು ಬಳಸಿಕೊಂಡು ಕಬ್ಬು ಕಟಾವ್ ಮಾಡಿದ್ದರು. ಬಳಿಕ ಲೋಡ್ ಮಾಡಿಕೊಂಡು ಗಂಗಾಪುರ ವಿಜಯನಗರ ಶುಗರ್ ಫ್ಯಾಕ್ಟರಿ ತಂದಿದ್ದಾರೆ.
ನಾವೇ ಕಬ್ಬು ಕಟಾವ್ ಮಾಡುತ್ತಿದ್ದೇವು. ಹೀಗಾಗಿ ನೀವು ಕಟಾವ್ ಮಾಡಿಕೊಂಡು ತಂದ ಕಬ್ಬನ್ನು ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮನನೊಂದ ಸಣ್ಣಹುನುಮಪ್ಪ ಕಾರ್ಖಾನೆಯ ಆವರಣದಲ್ಲಿ ವಿಷ ಸೇವಿಸಿ, ಪ್ರಾಣ ಬಿಟ್ಟಿದ್ದಾರೆ ಎಂದು ಸಣ್ಣಹನುಮಪ್ಪ ಮಗ ವಿರೇಶ್ ಹಾಗೂ ಮುಂಡರಗಿ ರೈತ ಮುಖಂಡ ವೀರಣ್ಣಗೌಡ ದೂರಿದ್ದಾರೆ.
ಈ ಘಟನೆಯಿಂದಾಗಿ ವಿಜಯನಗರ ಶುಗರ್ ಫ್ಯಾಕ್ಟರಿ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮುಂಡರಗಿ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv