-ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಪಟ್ಟಿಯಲ್ಲಿ 17ನೇ ಸ್ಥಾನ
-ಕೇಂದ್ರ ಗೃಹ ಸಚಿವಾಲಯ ಸಮೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್
ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ಈಗ ರಾಜ್ಯದಲ್ಲೇ ಅತ್ಯುತ್ತಮ ಪೊಲೀಸ್ ಠಾಣೆ ಎನ್ನುವ ಹೆಗ್ಗಳಿಕೆಯನ್ನ ಗಳಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆಗೆ ಉತ್ತಮ ರ‌್ಯಾಂಕ್ ಸಿಕ್ಕಿದೆ. ರಾಜ್ಯಕ್ಕೆ ನಂ. 1 ಆದರೆ ದೇಶಕ್ಕೆ 17ನೇ ಅತ್ಯುತ್ತಮ ಜನ ಸ್ನೇಹಿ ಪೊಲೀಸ್ ಠಾಣೆ ಎನ್ನುವ ಗರಿಮೆ ಪಡೆದಿದೆ.
ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಆ್ಯಂಡ್ ಡೆವೆಲಪ್ಮೆಂಟ್ ನೀಡಿದ ಮಾನದಂಡಗಳ ಆಧಾರದ ಮೇಲೆ 2019ರ ಅಕ್ಟೋಬರ್ ನಲ್ಲಿ ಗ್ರ್ಯಾಂಟ್ ತೋರಟನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗಬ್ಬೂರು ಠಾಣೆ ರ‌್ಯಾಂಕ್ ಪಡೆದಿದೆ. 2015ರಲ್ಲಿ ಗುಜರಾತಿನ ಕಚ್‍ನಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪ್ರಧಾನ ಮಂತ್ರಿಗಳ ನಿರ್ದೇಶನದಂತೆ ಕಾರ್ಯಕ್ಷಮತೆ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸಮೀಕ್ಷೆ ನಡೆದಿದೆ.
Advertisement
Advertisement
ಅಪರಾಧ ತಡೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ತನಿಖೆಯ ಗುಣಮಟ್ಟ, ಕಾನೂನು ಸುವ್ಯವಸ್ಥೆ, ಸಾರ್ವಜನಿಕರಿಗೆ ಪೊಲೀಸ್ ಲಭ್ಯತೆ, ಪೊಲೀಸ್ ಸಿಬ್ಬಂದಿ ವರ್ತನೆ, ರಸ್ತೆ ಸುರಕ್ಷತೆ ಕ್ರಮಕ್ಕೆ ಸಂಬಂಧಿಸಿದ ಸಮೀಕ್ಷೆಗೆ ಶೇ. 80 ಅಂಕ. ಸಾರ್ವಜನಿಕರ ಅಭಿಪ್ರಾಯ ಠಾಣೆಯಲ್ಲಿನ ವ್ಯವಸ್ಥೆ, ಸ್ವಚ್ಛತೆಗೆ ಶೇ. 20 ಅಂಕ ನಿಗದಿ ಮಾಡಲಾಗಿರುತ್ತದೆ.
Advertisement
Advertisement
ದೇಶದ 15, 579 ಠಾಣೆಗಳ ಪೈಕಿ ಮೊದಲ ಹಂತದ ಸಮೀಕ್ಷೆ ನಡೆಸಿ ರಾಜ್ಯದ ಮೂರು ಠಾಣೆಗಳಂತೆ 79 ಪೊಲೀಸ್ ಠಾಣೆಗಳನ್ನು ಗುರುತಿಸಿ ಅವುಗಳ ಕಾರ್ಯಕ್ಷಮತೆ, ಕಟ್ಟಡ ಸೌಲಭ್ಯ, ಸಾರ್ವಜನಿಕರೊಂದಿಗಿನ ಸಂಪರ್ಕದ ಆಧಾರದ ಮೇಲೆ ಗಬ್ಬೂರು ಪೊಲೀಸ್ ಠಾಣೆಯನ್ನು ರಾಜ್ಯದ ನಂ. 1 ಠಾಣೆ ಎಂದು ರ‌್ಯಾಂಕ್ ನೀಡಲಾಗಿದೆ.
ಗಬ್ಬೂರು ಪೊಲೀಸ್ ಠಾಣೆಗೆ ನಂ. 1 ಗರಿ ಬಂದಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ, ಠಾಣೆ ಪಿಎಸ್ ಐ ರಂಗಯ್ಯ ಖುಷಿ ವ್ಯಕ್ತಪಡಿಸಿದ್ದಾರೆ.