– ರೇವಣ್ಣಗೆ ಈಗಲೂ ಅಭಿವೃದ್ಧಿಯದ್ದೇ ಚಿಂತೆ
ಬೆಂಗಳೂರು: ಏನೂ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಹಾಕಿದ್ದಾರೆ ಎಂಬ ನೋವಿನಲ್ಲಿ ರೇವಣ್ಣ (H.D Revanna) ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕಿದರು ಎಂದು ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ (G.T Devegowda) ಅವರು ಹೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara) ರೇವಣ್ಣ ಅವರನ್ನು ಬೇಟಿಯಾದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ರೇವಣ್ಣ ಜೈಲಿಗೆ ಹೋದ ದಿನದಿಂದ ಅವರ ಭೇಟಿಗೆ ಬಂದಿರಲಿಲ್ಲ. ಇಂದು (ಸೋಮವಾರ) ಅವರನ್ನು ಭೇಟಿಯಾಗಿದ್ದೇನೆ. ಅವರು ಆರಾಮವಾಗಿ ಕೂತಿದ್ದು, ಜೊತೆಯಲ್ಲಿ ಚಹಾ ಕುಡಿದು, ಹಳೆಯ ವಿಚಾರಗಳನ್ನು ಮೆಲುಕು ಹಾಕಿದ್ರು. ಅವರಿಗೆ ಈಗಲೂ ಅಭಿವೃದ್ಧಿ ಕಾರ್ಯಕ್ರಮಗಳದ್ದೇ ಚಿಂತೆ. ಅಲ್ಲದೇ ನಾನೇನೂ ತಪ್ಪು ಮಾಡಿದ್ದೇನೆ ಎಂಬ ಚಿಂತೆಯಲ್ಲಿದ್ದಾರೆ ಎಂದರು.
ನನ್ನ ಬಳಿ ಅವರು ಮಾತನಾಡಿ, ಸಂತ್ರಸ್ತ ಮಹಿಳೆ ಜೊತೆ ಮಾತನಾಡಿ ಆರು ವರ್ಷಗಳಾಗಿವೆ. ನನ್ನನ್ನು ಈ ಪ್ರಕರಣದಲ್ಲಿ ಸೇರಿಸಿ ಹೀಗೆ ಮಾಡಿದ್ದಾರೆ. ನಾನು ತಪ್ಪು ಮಾಡಿದ್ರೆ ಇನ್ನೂ ಶಿಕ್ಷೆ ಕೊಡಲಿ ಅನುಭವಿಸಬಹುದಿತ್ತು ಎಂದು ರೇವಣ್ಣ ಭಾವುಕರಾದರು ಎಂದು ಅವರು ಹೇಳಿದ್ದಾರೆ.
ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದ ಅವರು, ರಾಜಕೀಯ ಹೇಗೆ ನಡೆಯುತ್ತಿದೆ? ನಾವು ಎಲ್ಲೆಲ್ಲಿ ಎಡವಿದ್ದೇವೆ? ನಮ್ಮ ಸರ್ಕಾರದ ಇದ್ದಾಗ ಕಾರ್ಯಕರ್ತರಿಗೆ ಏನೂ ಮಾಡಲು ಆಗಲಿಲ್ಲ. ಅಲ್ಪಾವಧಿ ಅಧಿಕಾರ ಬಂತು. ಅಧಿಕಾರ ಅನುಭವಿಸಿದವರು ಹೊರಟು ಹೋದ್ರು. ಮಂತ್ರಿಯಾಗಿದ್ದವರು ಹೊರಟು ಹೋದ್ರು. ನೀವು ಗೌಡರಿಗೋಸ್ಕರ ಪಕ್ಷದಲ್ಲಿ ಉಳಿದು ಗೌಡರಿಗೆ ನೆಮ್ಮದಿ ಕೊಟ್ಟಿದ್ದೀರಿ ಎಂದು ವಿಚಾರ ಹಂಚಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ (Prajwal Revanna) ವಿಚಾರವಾಗಿ ಯಾವುದೇ ಚರ್ಚೆ ಮಾಡಲಿಲ್ಲ. ರೇವಣ್ಣ ಕೂಡ ಪ್ರಜ್ವಲ್ ಬಗ್ಗೆ ಏನೂ ಹೇಳಲಿಲ್ಲ ಎಂದರು.
ನವೀನ್ ಗೌಡ ಮತ್ತು ಕಾರ್ತಿಕ್ ಗೌಡ ಇನ್ನೂ ಬಂಧನವಾಗದ ಬಗ್ಗೆ, ಎಸ್‍ಐಟಿ ಅಧಿಕಾರಿಗಳು ತನಿಖೆ ಮಾಡ್ತಾರೆ. ನಮಗೆ ಅವರ ಮೇಲೆ ನಂಬಿಕೆ ಇದೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ನ್ಯಾಯಯುತವಾಗಿ ತನಿಖೆ ಮಾಡ್ತಾರೆ ಎಂದು ಪದೇ ಪದೇ ಸಿಎಂ ಹೇಳ್ತಿದ್ದಾರೆ. ಪೆನ್‍ಡ್ರೈವ್ ಯಾರು ರಿಲೀಸ್ ಮಾಡಿದ್ರು? ಯಾರೂ ತಪ್ಪು ಮಾಡಿದ್ದಾರೆ ಎಲ್ಲವನ್ನೂ ತನಿಖೆ ಮಾಡಿ ಕಂಡುಹಿಡಿದು ಸಿಎಂ ಇತಿಹಾಸ ಸೃಷ್ಟಿಸಲಿ ಎಂದು ಅವರು ಹೇಳಿದ್ದಾರೆ.
ಅರಕಲಗೂಡು ಶಾಸಕ ಎ.ಮಂಜು ಅವರಿಗೂ ಪ್ರಕರಣ ಸುತ್ತಿಕೊಂಡಿದೆ. ಪೆನ್‍ಡ್ರೈವ್ ರಿಲೀಸ್ ಮಾಡಿದವರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಈ ಬಗ್ಗೆ ತನಿಖೆ ಮಾಡಿ ಪತ್ತೆ ಮಾಡುತ್ತಾರೆಂದು ಸಿಎಂ ಬೆನ್ನು ತಟ್ಟಿಕೊಂಡಿದ್ದಾರೆ. ನಮಗೂ ಕೂಡ ನಂಬಿಕೆ ಬಂದಿದೆ. ಎಲ್ಲರ ಕೈವಾಡ ಹೊರಗೆ ಬರಲಿದೆ. ಸ್ವಲ್ಪ ದಿನ ಕಾಯಬೇಕು ಎಂದು ಅವರು ಹೇಳಿದ್ದಾರೆ.
ರೇವಣ್ಣ ಜಾಮೀನಿನ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು ಅವರಿಗೆ ಜಾಮೀನು ಸಿಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.