ಬೆಂಗಳೂರು: ಕಾರ್ಯಕರ್ತರಿಗೆ ನಾವು ಮೊದಲು ನಮ್ಮ ಕ್ಷೇತ್ರವನ್ನು ನೋಡಿಕೊಳ್ಳೋಣ ಹಾಗೂ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡೋಣ. ನಂತರ ಮಂತ್ರಿ, ಮಂತ್ರಿ ಆದ್ಮೇಲೆ ಖಾತೆಯನ್ನು ನೋಡಿಕೊಳ್ಳೋಣ. ಈಗ ಇಡೀ ಮೈಸೂರು ಹಾಗೂ ನಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.
ಉನ್ನತ ಶಿಕ್ಷಣ ಖಾತೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಂದಾಯ ಹಾಗೂ ನೀರಾವರಿ ಖಾತೆಗಳನ್ನು ನೀಡುವಂತೆ ಕೇಳಿದ್ದೆ. ಆದರೆ ಆ ಖಾತೆಗಳು ಕಾಂಗ್ರೆಸ್‍ಗೆ ಹೋಗಿದೆ. ನಂತರ ನನಗೆ ಸಾರಿಗೆ ಖಾತೆ ಕೊಡಲು ನಿರ್ಧರಿಸಿದ್ದರು. ಆಗ ನನಗೆ ಕೋಪ ಬಂದಿತ್ತು. ಏಕೆಂದರೆ ನಾನು ಕುಮಾರಸ್ವಾಮಿ ಹಾಗೂ ಹಿರಿಯ ನಾಯಕರೊಂದಿಗೆ ಈ ಬಗ್ಗೆ ಮೊದಲೇ ಮಾತನಾಡಿದೆ. ಇನ್ನೂ ಎರಡು ದಿನದಲ್ಲಿ ಕುಮಾರಸ್ವಾಮಿ ಅವರ ಜೊತೆ ಮಾತಾಡಿ ವಿಷಯ ತಿಳಿಸುತ್ತೇನೆ ಎಂದರು.
ಕಾರ್ಯಕರ್ತರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಖಾತೆ ಶಿಕ್ಷಣಕ್ಕೆ ಸಂಬಂಧಪಟ್ಟಿದ್ದು. ಆ ಕ್ಷೇತ್ರದ ಪರಿಚಯವಿಲ್ಲದ ವ್ಯಕ್ತಿ ನಾನು. ಏಕೆಂದರೆ ನಾನು ಕಾಲೇಜಿಗೆ ಹೋಗಿ ಓದಿಲ್ಲ. ಪದವಿ ಕೂಡ ಪಡೆದುಕೊಂಡಿಲ್ಲ. ಬಹಳ ಎತ್ತರವಿರುವಂತಹ ಕ್ಷೇತ್ರ ಉನ್ನತ ಶಿಕ್ಷಣ ಆಗಿದ್ದು, ಅಂತಹವರು ನಮಲ್ಲಿ ಇದ್ದಾರೆ. ಅಂತವರಿಗೆ ಈ ಖಾತೆ ನೀಡಲಿ ಎಂಬುದು ಕಾರ್ಯಕರ್ತರ ಆಸೆ ಎಂದು ತಿಳಿಸಿದರು.
ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು ಕೂಡ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗಲಿಲ್ಲ ಎಂದು ಜನರು ಕೊರಗುತ್ತಿದ್ದಾರೆ. ಈಗ ನಾವು ಮೈಸೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ನಾವು ಚುನಾವಣೆ ಎದುರಿಸಿದ್ದೇವೆ. ಈಗ ಅವರು ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ ಎಂದು ಹೇಳಿದರು.
ಸಚಿವರಿಗೆ ಖಾತೆ ಹಂಚಿಕೆ ನಡೆದ ಬಳಿಕ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಯಾಕೆ? ಅವರಿಗೆ ಬೇರೆ ಖಾತೆಗಳನ್ನು ನೀಡಬಹುದಿತ್ತು. ಅಂತಹ ಖಾತೆಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡಲಿ ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ಆಕ್ರೋಶದ ಮೂಲಕ ಹೊರಹಾಕುತ್ತಿದ್ದಾರೆ.