– ರಸ್ತೆ, ಚರಂಡಿ ನಿರ್ಮಾಣದಿಂದ ಜನರು ಉದ್ಧಾರ ಆಗುತ್ತಾರಾ – ಗೃಹ ಸಚಿವರ ಪ್ರಶ್ನೆ
ತುಮಕೂರು: ವಿರೋಧ ಪಕ್ಷದವರು ಪದೇ ಪದೆ ನಮ್ಮ ಗ್ಯಾರಂಟಿ ಯೋಜನೆ (Congress Guarantee) ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದರೆ ಜನರು ಉದ್ಧಾರ ಆಗ್ತಾರಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಪ್ರಶ್ನಿಸಿದ್ದಾರೆ.
ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಂ, ಗ್ಯಾರಂಟಿ ಯೋಜನೆಯಿಂದ ಜನರ ಜೀವನ ಉದ್ಧಾರ ಆಗಿದೆ. ಆದರೆ, ಬರೀ ರಸ್ತೆ, ಚರಂಡಿಗಳನ್ನೇ ಮಾಡ್ತಾ ಇದ್ದರೆ ಜನರು ಉದ್ಧಾರ ಆಗ್ತಾರಾ ಎಂದು ಕೇಳಿದ್ದಾರೆ. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಕಹಳೆ – ಸಿದ್ದರಾಮಯ್ಯ, ಡಿಕೆಶಿ, ಸಚಿವರು, ಶಾಸಕರು ಭಾಗಿ
ಯಾರು ಗ್ಯಾರಂಟಿ ಕಾರ್ಯಕ್ರಮವನ್ನು ಟೀಕೆ ಮಾಡುತ್ತಾರೆ. ಈ ಕಾರ್ಯಕ್ರಮ ಯಾರು ಒಪ್ಪೋದಿಲ್ಲವೋ ಅವರಿಗೆ ಒಂದು ಪ್ರಶ್ನೆ. ಈ ಜನ ಏನಾಗಬೇಕು? ಆಯ್ತಪ್ಪ ನಾವು ಗ್ಯಾರಂಟಿ ಕೊಡೋದಿಲ್ಲ. ನಾಳೆಯಿಂದ ನಿಲ್ಸಿ ಬಿಡೋಣ. ಈ 58 ಸಾವಿರ ಕೋಟಿ ರೂ. ಏನು ನಾವು ಕೊಡ್ತಾ ಇದ್ದೀವಿ, ನಾಳೆ ನಿಲ್ಲಿಸ್ತೀವಿ. ಆದರೆ, ನೀವು ರಸ್ತೆ ಮಾಡೋದ್ರಿಂದ, ಚರಂಡಿ ಮಾಡೋದ್ರಿಂದ ಅಥವಾ ಇನ್ನೇನೊ ಕಾರ್ಯಕ್ರಮ ಮಾಡೋದ್ರಿಂದ ಆ ಬಡವರ ಜೀವನ ಏನಾಗುತ್ತದೆ? ಉದ್ಧಾರ ಆಗುತ್ತದಾ ಎಂದು ಪ್ರಶ್ನೆ ಮಾಡಿದ್ದಾರೆ. ಭೌತಿಕ ಸೌಲಭ್ಯಕ್ಕಿಂತ ಜನರ ಜೀವನಕ್ಕೆ ಬೇಕಾದ ಕಾರ್ಯಕ್ರಮ ಕೊಡಬೇಕು ಎಂದು ಪ್ರಸ್ತಾಪಿಸಿದರು.
ಹಾಗಂತ ನಾವು ರಸ್ತೆ ಮಾಡೋದನ್ನು ನಿಲ್ಲಿಸಿಲ್ಲ. ಮನೆಗಳನ್ನು ಕಟ್ಟೋದನ್ನು ನಿಲ್ಲಿಸಿಲ್ಲ. ಯಾವ ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಕೆಲಸ ಮಾಡಲು ಒಂದಿಷ್ಟು ನಿಧಾನ ಆಗಿರಬಹುದು ಎಂದು ಒಪ್ಪಿಕೊಂಡರು. ಆದರೆ, ಬಹಳ ಮುಖ್ಯವಾಗಿ ಮನುಷ್ಯನ ಜೀವನ ಸಾವಿರಾರು ವರ್ಷದ ಶೋಷಣೆ, ಅದು ಮುಂದುವರಿಯಬಾರದು ಅನ್ನೋದೆ ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಗ್ಯಾರಂಟಿ ಕೊಡುತ್ತೇವೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೆಸ್ಸಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ; ಮಮತಾ ಬ್ಯಾನರ್ಜಿ ಬಂಧನಕ್ಕೆ ಅಸ್ಸಾಂ ಸಿಎಂ ಆಗ್ರಹ

