– ಮೈಸೂರಲ್ಲಿ ರಾಜಾರೋಷವಾಗಿ ಮಾದಕವಸ್ತು ತಯಾರಿಸ್ತಿದ್ರು ಅನ್ನೋದೇ ಆತಂಕ: ಸಚಿವ
ಬೆಂಗಳೂರು: ದರ್ಶನ್ ಫ್ಯಾನ್ಸ್ Vs ಮೋಹಕ ತಾರೆ ರಮ್ಯಾ ನಡುವಿನ ಜಟಾಪಟಿ ಬಗ್ಗೆ ಗೃಹ ಸಚಿವ ಪರಮೇಶ್ವರ್ (G Parameshwar) ಪ್ರತಿಕ್ರಿಯಿಸಿದ್ದಾರೆ. ನಟಿ ರಮ್ಯಾ ದೂರು ಕೊಟ್ಟರೆ, ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಹೌದು. ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಫ್ಯಾನ್ಸ್ (Darshan Fans) ವಿರುದ್ಧ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ (Ramya) ಗರಂ ಆಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ. ಫೇಕ್ ಪ್ರೊಫೈಲ್ ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದವರ ವಿರುದ್ಧ ದೂರು ಕೊಡಲು ನಟಿ ತಯಾರಿ ನಡೆಸುತ್ತಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ. ಪರಮೇಶ್ವರ್, ನಟಿ ದೂರು ಕೊಟ್ಟರೆ, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಅಲ್ಲದೇ ನಮ್ಮಲ್ಲಿ ಕೆಲವು ಪ್ರಕರಣದಲ್ಲಿ ಸ್ವಯಂಪ್ರೇರಿತ ತಗೋತಾರೆ. ಆಥರ ಏನಾದ್ರೂ ಅವಕಾಶ ಇದ್ರೆ ಪೊಲೀಸರು ಪರಿಶೀಲನೆ ಮಾಡ್ತಾರೆ ಅಂತಲೂ ಹೇಳಿದ್ದಾರೆ.
ರಾಜಾರೋಷವಾಗಿ ಡ್ರಗ್ಸ್ ತಯಾರಿಸ್ತಿದ್ರು ಅನ್ನೋದು ಆತಂಕ
ಇನ್ನೂ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದರ ಸಂಪೂರ್ಣ ಮಾಹಿತಿ ಇನ್ನೂ ಬರಬೇಕು. ರಾಜಾರೋಷವಾಗಿ ಇಲ್ಲಿ ಡ್ರಗ್ಸ್ ತಯಾರಿಸ್ತಿದ್ರು ಅನ್ನೋದು ಆತಂಕದ ವಿಚಾರ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಸ್ಥಳೀಯ ಠಾಣೆಯವರಿಗೆ ಗೊತ್ತಾಗಿಲ್ಲ, ಬಾಂಬೆ ಪೊಲೀಸರು ಬಂದು ದಾಳಿ ಮಾಡ್ತಾರೆ ಅಂದ್ರೆ ನಮ್ಮದೇ ಲೋಪ ಎದ್ದು ಕಾಣ್ತದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, ಎಸ್‌ಪಿಗಳಿಗೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜಿಲೆಟಿನ್ ಕಡ್ಡಿಗಳ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿ, ಕ್ವಾರಿಗಳಿಗೆ ಅಂತ ಇದನ್ನ ಇಟ್ಟಿದ್ರು ಅನ್ನೋದು ಮಾಹಿತಿ ಇದೆ. ಆತ ಪೊಲೀಸರು ಬಂದ್ರು ಅಂತ ಹೆದರಿ ಅಲ್ಲೇ ಬಿಟ್ಟು ಹೋಗಿದ್ದಾನೆ. ಯಾರಿಗೋ ಅದನ್ನು ಕೊಡಬೇಕಿತ್ತು, ಪೊಲೀಸರನ್ನು ನೋಡಿ ಅಲ್ಲೇ ಬಿಟ್ಟು ಹೋಗಿದ್ದಾನೆ ಅಂತ ನನಗೆ ಮಾಹಿತಿ ಬಂದಿದೆ. ಇದರ ಬಗ್ಗೆ ಇನ್ನೂ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ.