Stampede Case | ದೊಡ್ಡಮಟ್ಟದ ಸಮಾರಂಭಗಳಿಗೆ ಹೊಸ ಎಸ್‌ಒಪಿ ರೂಪಿಸುತ್ತೇವೆ – ಪರಮೇಶ್ವರ್

Public TV
3 Min Read
Parameshwara

– ಎಲ್ಲಿ, ಏನು ಲೋಪ ಆಗಿದೆ ಅನ್ನೋದು ಗೊತ್ತಾದ ಬಳಿಕ ತಪ್ಪು ಯಾರದ್ದು ಅಂತ ಹೊತ್ತಾಗುತ್ತೆ ಎಂದ ಪರಂ

ಬೆಂಗಳೂರು: ದೊಡ್ಡ‌ಮಟ್ಟದ ಸಭೆ, ಸಮಾರಂಭ ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwar) ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ (Cricket History) ಆಗಿರಲಿಲ್ಲ. ಮೊದಲನೇಯದಾಗಿ ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಕೊರುತ್ತೇನೆ. ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಸಿಎಂ ಅ‌ವರು ನಿನ್ನೆ ಸಭೆ ನಡೆಸಿ, ಅನೇಕ ಮಾಹಿತಿ ಪಡೆದು ಮಾತನಾಡಿದ್ದಾರೆ. ಈ ಬಗ್ಗೆ ಮ್ಯಾಜೆಸ್ಟ್ರೆಟಿಯಲ್ ತನಿಖೆಗೆ ಆದೇಶ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ (Bengaluru City DC) ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಆದೇಶಿಸಲಾಗಿದೆ. ಅವರು ಯಾರೇ ಆಗಿರಲಿ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ವಿವರಣೆ ಮಾಡಲು ಹೋಗುವುದಿಲ್ಲ. ತನಿಖೆಯ ವರದಿ ಬರುವವರೆಗು ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.

ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ – ಮಕ್ಕಳ ಸಾವು ನೆನೆದು ಕಣ್ಣೀರಿಟ್ಟ ಡಿಕೆಶಿ

ಇಂತಹ ಘಟನೆಗಳು ಆಗಬಾರದು ಎಂಬ ವಿಚಾರದಲ್ಲಿ ಗೃಹ ಇಲಾಖೆಯಿಂದ ಒಂದು ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಮಾಡುತ್ತೇವೆ.‌ ಇನ್ಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ, ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಪರಮೇಶ್ವರ್ ಹೇಳಿದರು. ಇದನ್ನೂ ಓದಿ: Stampede Case | ಕಾಲ್ತುಳಿತ ಬಗ್ಗೆ ʻಪಬ್ಲಿಕ್‌ ಟಿವಿʼ ಪ್ರಶ್ನೆಗೆ ಉತ್ತರ ನೀಡದೇ ನುಣುಚಿದ KSCA

ಹೊಸ ಎಸ್‌ಒಪಿ ಮಾಡುತ್ತೇವೆ. ನಾವು ಕೆಲವು ಸೂಚನೆಗಳನ್ನು ಕೊಡುತ್ತೇವೆ. ಯಾವತ್ತು ಕೂಡ ಇಂತಹ ಘಟನೆಗಳಾಗಬಾರದು. ಅಮಾಯಕರ ಸಾವುಗಳು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ನಿನ್ನೆ ಶವಗಾರದಲ್ಲಿ ನೋಡಿದಾಗ ದುಃಖವಾಯಿತು. 20-25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದಾಗ ಜೀವವನ್ನೇ‌ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಯಾರು ಊಹೆ ಮಾಡಿರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ತನಗಿದ್ದ ಒಬ್ಬ ಮಗನನ್ನ ಕಳೆದಕೊಂಡ ಬಗ್ಗೆ ವೈದೇಹಿ ಆಸ್ಪತ್ರೆಯಲ್ಲಿ ಹೇಳಿಕೊಂಡರು. ಮಗ ಕಾಲೇಜಿಗೆ ಹೋಗುವುದಾಗಿ ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ. ಈ ರಿತೀಯಾಗಿದೆ. ಸಮುದಾಯ ಸಂತೋಷದಲ್ಲಿ ಬಂದರು. ಇದನ್ನು ಯಾರು ಕೂಡ ಊಹಿಸಿರಲಿಲ್ಲ. 34 ಸಾವಿರ ಸೀಟುಗಳ ಸಾಮಾರ್ಥ್ಯ ಇರುವ ಸ್ಟೇಡಿಯಂಗೆ 3 ಲಕ್ಷ‌ ಜನ ಬಂದಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್‌ ಘೋಷಿಸಿದ್ದ RCB ಫ್ರಾಂಚೈಸಿ

ಮೆಟ್ರೋ ಸಂಸ್ಥೆಯವರು ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ‌ ಮಾಡಿದ್ದಾರೆ. ತನಿಖೆಯ ವರದಿ ಬರುವವರೆಗೂ ಏನನ್ನು ಹೇಳುವುದಿಲ್ಲ‌. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘಟನೆ ನಡೆದ ಸ್ಥಳ‌ ಪರಿಶೀಲನೆ ಮಾಡುತ್ತೇನೆ. ಆರ್‌ಸಿಬಿ, ಕೆಎಸ್‌ಸಿಎ ಅವರೊಂದಿಗೆ ಸಭೆ ಮಾಡುತ್ತೇನೆ. ತಾಂತ್ರಿಕವಾಗಿ ಏನೇ ಇದ್ದರು ಸಹ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಎಲ್ಲಿ ಮತ್ತು ಏನು ಲೋಪ ಆಗಿದೆ ಎಂಬುದು ಗೊತ್ತಾದ ಬಳಿಕ ತಪ್ಪು ಯಾರದ್ದು ಎಂಬುದು ಗೊತ್ತಾಗಲಿದೆ ಎಂದರು. ಇದನ್ನೂ ಓದಿ: ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ: ಅಶೋಕ್ ಕಿಡಿ

Share This Article