ಬೆಂಗಳೂರು: ರಾಜ್ಯದ ಹಲವೆಡೆ ಹೊರ ರಾಜ್ಯದ ಕಟ್ಟಡ ಕಾರ್ಮಿಕರಿಂದ ಅಪರಾಧ ಕೃತ್ಯಗಳು ನಡೆದಿವೆ. ಇದರ ಬಗ್ಗೆ ಕ್ರಮಕ್ಕೆ ಕಾರ್ಮಿಕ ಇಲಾಖೆ ಜೊತೆ ಜಂಟಿಯಾಗಿ ಸಭೆ ನಡೆಸುತ್ತೇವೆ ಎಂದು ಗೃಹಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.
ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹೊರ ರಾಜ್ಯದಿಂದ ಸಾಕಷ್ಟು ಜನ ರಾಜ್ಯಕ್ಕೆ ಬರುತ್ತಾರೆ. ಅಂತವರಿಗೆ ಇಲ್ಲಿನ ಸಂಸ್ಕೃತಿ ಜನರ ಭಾವನೆ ಅರ್ಥ ಆಗುವುದಿಲ್ಲವೋ ಏನೋ ಗೊತ್ತಿಲ್ಲ. ಹೊರ ರಾಜ್ಯದಿಂದ ಬಂದವರಿಂದ ಹೆಚ್ಚು ಪ್ರಕರಣಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಗುವನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪಿಯ ಎನ್‌ಕೌಂಟರ್ ವಿಚಾರವಾಗಿ, ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗುವಾಗ ಆರೋಪಿ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಅವರ ಆತ್ಮರಕ್ಷಣೆಗಾಗಿ, ಕಾಲಿಗೆ ಗುಂಡು ಹಾರಿಸಿದ್ದಾರೆ. ಆದರೆ ಅದು ಬೆನ್ನಿಗೆ ಬಿದ್ದಿದೆ. ಈ ವೇಳೆ ಆತನನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಾಗಲೇ ಆರೋಪಿ ಮೃತಪಟ್ಟಿದ್ದಾನೆ ಎಂದು ವರದಿ ಇದೆ. ಈ ಬಗ್ಗೆ ತಕ್ಷಣ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ತನಿಖೆ ಮಾಡಿದ ನಂತರ ಸತ್ಯಾಂಶ ತಿಳಿಯುತ್ತದೆ ಎಂದಿದ್ದಾರೆ.
ಏನಿದು ಪ್ರಕರಣ?
ಬಿಹಾರ ಮೂಲದ ಸೈಕೋಪಾತ್ ರಿತೇಶ್ ಕುಮಾರ್ ಎಂಬಾತ ಬಾಲಕಿಯನ್ನು ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್‌ನತ್ತ ಧಾವಿಸಿದ್ದರು. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದ.
ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್‌ಗೆ ಮಹಿಳಾ ಪಿಎಸ್‌ಐ ಗುಂಡೇಟು ನೀಡಿದ್ದರು. ಬೆನ್ನಿಗೆ ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಮೃತಪಟ್ಟಿದ್ದ.