ಬೆಂಗಳೂರು: ಕಾಂಗ್ರೆಸ್ ಸರ್ವ ಸದಸ್ಯರ ಸಭೆಗೆ ಗೃಹ ಸಚಿವ ಪರಮೇಶ್ವರ್ ಮತ್ತು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಗೈರಾಗಿದ್ದಾರೆ.
ಗೈರಾಗಿದ್ದಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಗರಂ ಆಗಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಳಿ ಅವರು ಮಾಹಿತಿ ಪಡೆದಿದ್ದಾರೆ.
ಪಕ್ಷದ ಕೆಲಸಕ್ಕಿಂತ ದೊಡ್ಡ ಕಾರ್ಯಕ್ರಮ ಇತ್ತಾ? ಗೈರಾಗಲು ಅನುಮತಿ ಪಡೆದಿದ್ರಾ? ಎಂದು ಡಿಕೆಶಿ ಬಳಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿಎಂ, ಅನುಮತಿ ಪಡೆದಿರುವ ವಿಚಾರ ಗೊತ್ತಿಲ್ಲ. ಸಭೆ ಬಗ್ಗೆ ಎಲ್ಲರಿಗೂ ಮಾಹಿತಿ ಇತ್ತು. ಹಾಜರಾಗುವಂತೆ ಸೂಚಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್‍ನಲ್ಲಿ ಹೆಚ್ಚಾಗಿರುವ ಪವರ್ ಶೇರಿಂಗ್ ಚರ್ಚೆ ಹಾಗೂ ಡಿನ್ನರ್ ಮೀಟಿಂಗ್ ವಿವಾದದ ಬೆನ್ನಲ್ಲಿ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿದ್ದಾರೆ. ಇನ್ನೂ ಈ ದಿನ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ, ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಸಭೆಗೆ ಗೈರಾದ ಪರಮೇಶ್ವರ್, ಇತ್ತೀಚೆಗೆ ದಲಿತ ನಾಯಕರಿಗೆ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ಮುಂದೂಡಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು.
ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು. ಸಿಎಂ ಆಪ್ತರ ಜೊತೆ ನಡೆಸಿದ ಮೀಟಿಂಗ್ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿದ್ದರು.