ಮಂಡ್ಯ: ದೂರದೃಷ್ಟಿಯ ಕನಸುಗಾರ, ರಾಜಕೀಯ ಸಂತೆಯೊಳಗಿನ ಸಂತ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM Krishna) ಅವರು ತಮ್ಮ ಬದುಕಿನ ಯಾತ್ರೆ ಮುಗಿಸಿ, ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
- Advertisement -
ಇಂದು (ಡಿ.11) ಸಂಜೆ ತಮ್ಮ ಹುಟ್ಟೂರು ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಹೊರವಲಯದ ಕೆಫೆ ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಹಾಗೂ ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು. ಇದಕ್ಕೂ ಮುನ್ನ ಪೊಲೀಸರ ತಂಡದಿಂದ ರಾಷ್ಟ್ರಗೀತೆ ನಮನ ಸಲ್ಲಿಸಲಾಯಿತು. ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು, ಎಸ್‌ಎಂಕೆ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಬಳಿಕ ಭಾನುಪ್ರಕಾಶ್ ಶರ್ಮಾ ಹಾಗೂ ಇತರ 15 ವೈದಿಕರ ತಂಡವು ಮಂತ್ರಘೋಷಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ, ಎಸ್.ಎಂ ಕೃಷ್ಣರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
- Advertisement -
- Advertisement -
ಚಿತೆಗೆ ಅರಣ್ಯ ಇಲಾಖೆಯಿಂದ 1 ಸಾವಿರ ಕೆಜಿ ಶ್ರೀಗಂಧದ ಕಟ್ಟಿಗೆ ಪೂರೈಸಲಾಗಿತ್ತು. ಬಾಳೆ ಎಲೆಯಲ್ಲಿ ಪಾರ್ಥಿವ ಶರೀರ ಮುಚ್ಚಿ, 50 ಕೆಜಿ ತುಪ್ಪ ಬಳಸಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯ್ತು. ಅಂತಿಮ ವಿಧಿ ವಿಧಾನದ ಇಡೀ ಉಸ್ತುವಾರಿ ಡಿಸಿಎಂ ಡಿಕೆ ಶಿವಕುಮಾರ್ ವಹಿಸಿಕೊಂಡಿದ್ದರು. ಇನ್ನು ಅಂತ್ಯ ಸಂಸ್ಕಾರದ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಪ್ರಮುಖ ಮಠಗಳ ಪೀಠಾಧಿಪತಿಗಳು ಹಾಜರಿದ್ದು, ಅಂತಿಮ ನಮನ ಸಲ್ಲಿಸಿದರು.
- Advertisement -
ಎಸ್‌ಎಂಕೆ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ಅಂತಿಮ ದರ್ಶನ ಪಡೆದು ವಿದಾಯ ಹೇಳಿದ್ರು. ಅಲ್ಲದೇ ಅಪಾರ ಸಂಖ್ಯೆಯಲ್ಲಿ ಮಂಡ್ಯ, ರಾಮನಗರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ ಪಂಚಭೂತಗಳಲ್ಲಿ ಲೀನವಾಗುವ ಮೂಲಕ ಕರುನಾಡಿನ ಕಣ್ಮಣಿ ಕೃಷ್ಣ ಅಮರರಾದರು.
ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆಗೂ ಮುನ್ನ ಸದಾಶಿವನಗರದ ಅವರ ಮನೆಯಲ್ಲಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಯ್ತು. ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ರು. ಬಳಿಕ ಅಂತಿಮಯಾತ್ರೆಗೆ ಚಿರಶಾಂತಿ ವಾಹನ ಸಿದ್ಧಪಡಿಸಲಾಗಿತ್ತು. ಸಂಪೂರ್ಣ ಬಿಳಿ ಸೇವಂತಿಗೆ, ಗುಲಾಬಿ ಹೂಗಳು, ತುಳಸಿಯಿಂದ ವಾಹನಕ್ಕೆ ಅಲಂಕಾರ ಮಾಡಲಾಗಿತ್ತು. ಸರಿಯಾಗಿ ಬೆಳಗ್ಗೆ 8 ಗಂಟೆ ವೇಳೆಗೆ ಸದಾಶಿವನಗರದಿಂದ ಹುಟ್ಟೂರು ಸೋಮನಹಳ್ಳಿವರೆಗೆ ಅಂತಿಮಯಾತ್ರೆ ಸಾಗಿತು.
ಪಾರ್ಥಿವ ಶರೀರದ ಜೊತೆಗೆ ವಾಹನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಾಗಿದ್ರು. ಸೋಮನಹಳ್ಳಿಗೆ ಸಾಗುವ ಮಾರ್ಗದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಸೇರಿದಂತೆ ಮಧ್ಯದಲ್ಲಿ ಕೆಲ ಸಮಯ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಯ್ತು. ಇದನ್ನೂ ಓದಿ: ಶರಾವತಿ ಜಲವಿದ್ಯುತ್ ಯೋಜನೆ – ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ
ದಾರಿಯುದ್ದಕ್ಕೂ ಸ್ಥಳೀಯ ಶಾಸಕರು, ಸಾರ್ವಜನಿಕರು ಚಿರಶಾಂತಿ ವಾಹನಕ್ಕೆ ಹೂಗಳನ್ನ ಚೆಲ್ಲಿ ಅಭಿವೃದ್ಧಿ ಹರಿಕಾರನಿಗೆ ಅಂತಿಮ ನಮನ ಸಲ್ಲಿಸಿ ವಿದಾಯ ಹೇಳಿದ್ರು. ಇದನ್ನೂ ಓದಿ: ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್‌ಎಂಕೆ ಮಾದರಿ: ಮಾಧುಸ್ವಾಮಿ