ಕೋಲಾರ: ಪುರಾತನ ಬೆಟ್ಟವೊಂದರಲ್ಲಿ ನಿಧಿ ಶೋಧ ಮಾಡುತ್ತಿದ್ದ ಐವರನ್ನ ಗ್ರಾಮಸ್ಥರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಅರಾಭಿಕೊತ್ತನೂರು ಬೆಟ್ಟದಲ್ಲಿ ನಿಧಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಐದು ಮಂದಿ ನಿಧಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ರಘು, ನರಸಿಂಹ, ಪ್ರಸಾದ್, ಆನಂದ್ ಹಾಗೂ ಗುರು ಮೂರ್ತಿ ಎಂದು ಗುರುತಿಸಲಾಗಿದೆ. ಕಳ್ಳರು ಚಿಂತಾಮಣಿ ಮೂಲದವರು ಎನ್ನಲಾಗಿದೆ.
ಐವರನ್ನ ಹಿಡಿದು ಥಳಿಸಿರುವ ಗ್ರಾಮಸ್ಥರು ಬಟ್ಟೆ ಹರಿದು ನಿಧಿ ಕಳ್ಳರ ಬಳಿ ಇದ್ದ ನಿಂಬೆಹಣ್ಣು ಹಾಗೂ ನಿಧಿ ಶೋಧಕ್ಕೆ ತಂದಿದ್ದ ಸಲಕರಣಗಳನ್ನ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿಯೇ ಕಟ್ಟಿ ಹಾಕಿ ಕೋಲಾರ ಗ್ರಾಮಾಂತರ ಪೊಲೀಸರಿಗೆ ಐವರನ್ನ ಒಪ್ಪಿಸಿದ್ದಾರೆ.
ಕಳೆದ ರಾತ್ರಿ ಗ್ರಾಮದ ಪಕ್ಕದಲ್ಲಿರುವ ಪುರಾತನ ಬೆಟ್ಟದಲ್ಲಿ ನಿಧಿ ಶೋಧಿಸುತ್ತಿದ್ದ ವೇಳೆ ಗ್ರಾಮಸ್ಥರು ಆರೋಪಿಗಳನ್ನ ನೋಡಿದ್ದಾರೆ. ನಂತರ ವಿಚಾರಣೆ ನಡೆಸಿದ ವೇಳೆ ನಾವು ಬೆಟ್ಟದಲ್ಲಿ ಕಲ್ಲು ಹುಡುಕಾಟ ಮಾಡುತ್ತಿದ್ದೇವೆ ಎಂದು ನಿಧಿ ಚೋರರು ಹೇಳಿದ್ದರು. ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರು ನಿಧಿ ಕಳ್ಳರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.