Tuesday, 17th July 2018

Recent News

70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

ನವದೆಹಲಿ: ದೀಪಾವಳಿ ಹಬ್ಬದ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಅಮೆರಿಕದಲ್ಲಿ ಚಂಡಮಾರುತದಿಂದಾಗಿ ತೈಲ ಉತ್ಪಾದನೆ ಕಡಿಮೆಯಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿತ್ತು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಾಣಲಿದ್ದು ದೀಪಾವಳಿ ವೇಳೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು.

ಜಿಎಸ್‍ಟಿ ವ್ಯಾಪ್ತಿಗೆ ತಂದರೆ ತೈಲ ಕಂಪೆನಿಗಳಿಗೆ ಲಾಭವಾಗಲಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಅವರು ಜಿಎಸ್‍ಟಿ ಅಡಿ ತೈಲಗಳು ಬಂದರೆ ಗ್ರಾಹಕರಿಗೆ ಲಾಭ ಆಗಲಿದೆ ಎಂದರು.

ಪೆಟ್ರೋಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಸೆಪ್ಟೆಂಬರ್ 13 ರಂದು 70.38 ರೂ. ಇತ್ತು. ಇದರಲ್ಲಿ 30.70 ರೂ. ಡೀಲರ್ ಶುಲ್ಕ, 21.48 ರೂ. ಅಬಕಾರಿ ಸುಂಕ 3.24 ರೂ. ಡೀಲರ್ ಕಮಿಷನ್, 14.96 ರೂ. ವ್ಯಾಟ್ ತೆರಿಗೆ ಇದೆ.

ಡೀಸೆಲ್ ಬೆಲೆಯಲ್ಲಿ ಯಾರಿಗೆ ಎಷ್ಟು ಪಾಲು?
ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಗೆ ಸೆಪ್ಟೆಂಬರ್ 13 ರಂದು 58.72 ರೂ.ಇತ್ತು. ಇದರಲ್ಲಿ 30.54 ರೂ. ಡೀಲರ್ ಶುಲ್ಕ, 17.33 ರೂ. ಅಬಕಾರಿ ಸುಂಕ 2.18 ರೂ. ಡೀಲರ್ ಕಮಿಷನ್, 8.67 ರೂ. ವ್ಯಾಟ್ ತೆರಿಗೆ ಇದೆ.

ಬೇರೆ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಎಷ್ಟಿದೆ?
ಪೆಟ್ರೋಲ್: ಭಾರತ(ದೆಹಲಿ) 70.38 ರೂ., ಪಾಕಿಸ್ತಾನ 40.82 ರೂ., ಬಾಂಗ್ಲಾದೇಶ 69.16 ರೂ., ಶ್ರೀಲಂಕಾ 49.80 ರೂ., ನೇಪಾಳ 61.88 ರೂ. ಇದೆ.

ಡೀಸೆಲ್: ಭಾರತ(ದೆಹಲಿ)58.72 ರೂ., ಪಾಕಿಸ್ತಾನ 47.15 ರೂ., ಬಾಂಗ್ಲಾದೇಶ 52.27 ರೂ., ಶ್ರೀಲಂಕಾ 40.43 ರೂ., ನೇಪಾಳ 46.72 ರೂ. ಇದೆ.

14.2 ಕೆಜಿ ತೂಕದ ಎಲ್‍ಪಿಜಿ ಸಿಲಿಂಡರ್: ಭಾರತ 487 ರೂ., ಪಾಕಿಸ್ತಾನ 1081.32 ರೂ., ಬಾಂಗ್ಲಾದೇಶ 639.50 ರೂ., ಶ್ರೀಲಂಕಾ 638.68 ರೂ., ನೇಪಾಳ 836.62 ರೂ. ಇದೆ.

ಪೆಟ್ರೋಲ್ ಜಿಎಸ್‍ಟಿ ಅಡಿ ಬರುತ್ತಾ?
ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

ಒಂದು ವೇಳೆ ಪೆಟ್ರೋಲ್ ಜಿಎಸ್‍ಟಿ ಅಡಿ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆಯಾಗುತ್ತದೆ. ಆದರೆ ಆದಾಯಕ್ಕೆ ಭಾರೀ ಹೊಡೆತ ಬೀಳುವ ಕಾರಣ ಜಿಎಸ್‍ಟಿ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ.

ಬೆಲೆ ಕಡಿಮೆಯಾಗಬಾರದು:
ಪೆಟ್ರೋಲ್ ಬೆಲೆ ಕಡಿಮೆಯಾಗಬಾರದು ಎನ್ನುವ ವಾದವನ್ನು ಕೆಲವರು ಮಂಡಿಸುತ್ತಿದ್ದಾರೆ. ಒಂದು ವೇಳೆ ಭಾರೀ ಇಳಿಕೆಯಾದರೆ ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿಯಬಹುದು. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುವುದಲ್ಲದೇ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಹೀಗಾಗಿ ಬೆಲೆ ಇಳಿಕೆಯಾಗಬಾರದು ಎನ್ನುವ ವಾದವನ್ನು ಕೆಲ ಆರ್ಥಿಕ ತಜ್ಞರು ಮಂಡಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವ ಬದಲು ಸಾರ್ವಜನಿಕ ಸಾರಿಗೆಯ ಟಿಕೆಟ್ ಬೆಲೆಯನ್ನು ಇಳಿಸುವುದು ಉತ್ತಮ. ಇದರಿಂದಾಗಿ ಜನರು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ತೈಲ ಬೆಲೆ ಏರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಈಗ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜಿಎಸ್‍ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

Leave a Reply

Your email address will not be published. Required fields are marked *