ಬೆಂಗಳೂರು: ಶನಿವಾರದಿಂದಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ ಜಾರಿಯಾಗಲಿದ್ದು, ಜನಸಾಮಾನ್ಯರ ಜೇಬು ಮತ್ತಷ್ಟು ಖಾಲಿಯಾಗಲಿದೆ.
ಪೆಟ್ರೋಲ್- ಡೀಸೆಲ್: ಬಜೆಟ್‍ನಲ್ಲಿ ತೈಲ ದರದ ಮೇಲೆ ವಿಧಿಸಲಾಗುತ್ತಿದ್ದ ಸೆಸ್ ದರವನ್ನು 30% ದಿಂದ 32%ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಶನಿವಾರದಿಂದ ಪೆಟ್ರೋಲ್ ಪ್ರತಿ ಲೀಟರ್ ಗೆ 1.14 ರೂ. ಮತ್ತು ಡೀಸೆಲ್ ಲೀಟರ್ ಗೆ 1.12 ರೂ. ದುಬಾರಿಯಾಗಲಿದೆ. ಪ್ರತಿ ತಿಂಗಳು ನೀವು 100 ಲೀಟರ್ ಪೆಟ್ರೋಲ್ ಬಳಸಿದರೆ ಈಗ ಪಾವತಿ ಮಾಡುತ್ತಿದ್ದ ದರಕ್ಕಿಂತ ಹೆಚ್ಚುವರಿಯಾಗಿ 120 ರೂ. ಪಾವತಿಸಬೇಕಾಗುತ್ತದೆ. ಡೀಸೆಲ್ ದರ ಏರಿಕೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಮನೆಯ ದಿನಸಿ, ತರಕಾರಿ, ಹಾಲಿನ ದರದ ಜೊತೆ ಬಸ್, ಟ್ಯಾಕ್ಸಿ ಪ್ರಯಾಣ ದರವೂ ಏರಿಕೆಯಾಗುವ ಸಾಧ್ಯತೆಯಿದೆ.
Advertisement
ವಿದ್ಯುತ್: ಗೃಹ ಬಳಕೆಯ ವಿದ್ಯುತ್ ಮೇಲಿನ ತೆರಿಗೆಯನ್ನು 6% ರಿಂದ 9% ಏರಿಕೆ ಮಾಡಲಾಗಿದೆ. 3% ರಷ್ಟು ಅಧಿಕ ಮಾಡಿದ್ದರಿಂದ ತಿಂಗಳಿಗೆ 500 ರೂ. ವಿದ್ಯುತ್ ಬಿಲ್ ಪಾವತಿಸುತ್ತಿರುವ ಮನೆಗೆ ವಿದ್ಯುತ್ ಬಿಲ್‍ನಲ್ಲಿ ಹೆಚ್ಚುವರಿಯಾಗಿ 15 ರೂ. ಸೇರಿ 515 ರೂ. ಪಾವತಿಸಬೇಕಾಗುತ್ತದೆ.
Advertisement
ಮದ್ಯ: ರಾಜ್ಯ ಸರ್ಕಾರ ಹೆಚ್ಚುವರಿ ವೆಚ್ಚಗಳಿಗೆ ಆದಾಯ ಸಂಗ್ರಹಿಸಲು ಹೆಚ್ಚಾಗಿ ಅಬಕಾರಿ ಇಲಾಖೆಯನ್ನೇ ನೆಚ್ಚಿಕೊಂಡಿದ್ದು, ತನ್ನ ಪರಿಷ್ಕೃತ ಬಜೆಟ್‍ನಲ್ಲಿ ಮದ್ಯದ ವಿವಿಧ ಸ್ಲಾಬ್ ಗಳ ಮೇಲೆ ಅಬಕಾರಿ ಸುಂಕವನ್ನು 4%ರಷ್ಟು ಹೆಚ್ಚಿಸಲಾಗಿದೆ. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು 8% ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4% ಏರಿಕೆ ಮಾಡಿದ್ದರಿಂದ 2018-19ನೇ ಸಾಲಿನಲ್ಲಿ ಮದ್ಯದ ಬೆಲೆ 12% ರಷ್ಟು ಏರಿಕೆಯಾಗಲಿದೆ.
Advertisement
ಎಷ್ಟು ಏರಿಕೆಯಾಗುತ್ತೆ?
ಹಿಂದಿನ ಸರ್ಕಾರ 8% ರಷ್ಟು ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ 500 ರೂ. ಮೌಲ್ಯದ ಒಂದು ಬಾಟಲ್ ಮದ್ಯದ ಬೆಲೆ 540 ರೂ. ಆಗಿತ್ತು. ಈಗ ಮತ್ತೆ 4% ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಆ ಬಾಟಲ್ ನ ಬೆಲೆ 560 ರೂ. ಆಗುತ್ತದೆ.
Advertisement
ಮೋಟಾರು ವಾಹನ ತೆರಿಗೆ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.